ಅರಣ್ಯ ಸಿಬ್ಬಂದಿ ಕಡಿದು ಹಾಕಿದ್ದ ಪೈಪುಗಳ ಮರುಜೋಡಣೆ : ನೀರು ಪೂರೈಕೆ ಆರಂಭ

ಸುಳ್ಯ : ದಲಿತ ಕಾಲೊನಿ ಮಂದಿ ಕುಡಿಯುವ ನೀರಿಗೆಂದು ಅರಣ್ಯದೊಳಗೆ ಹಾಕಿದ್ದ ಪೈಪುಗಳನ್ನು ಕಡಿದು ಹಾಕಿದ ಘಟನೆ ಕೆಲವು ದಿನಗಳ ಹಿಂದೆ ನಡೆದಿದ್ದು, ಇದೀಗ ಹೊಸ ಪೈಪುಗಳನ್ನು ಮರುಜೋಡಿಸುವ ಮೂಲಕ ನೀರು ಪೂರೈಕೆ ಆರಂಭಗೊಂಡಿದೆ.

ಕಾಡ್ಗಿಚ್ಚು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾಡಿಗೆ ಬಂದಿದ್ದ ಸಿಬ್ಬಂದಿ ಕತ್ತಿಯಿಂದ ಪೈಪುಗಳನ್ನು ಕಡಿದು ಹಾಕಿ ದೌರ್ಜನ್ಯ ಮೆರೆದಿದ್ದರು. ಇದರಿಂದ ಸುಳ್ಯ ತಾಲೂಕಿನ ಮರ್ಕಂಜ ಮತ್ತು ಅರಂತೋಡು ಗ್ರಾಮದ ಗಡಿ ಪ್ರದೇಶವಾದ ಅಜ್ಜಿಕಲ್ಲು, ಕಟ್ಟಕೋಡಿ, ಬಾಜಿನಡ್ಕ ಪ್ರದೇಶದ 15ಕ್ಕೂ ಹೆಚ್ಚು ಕುಟುಂಬದ ಜನರು ಕುಡಿಯಲೂ ನೀರಿಲ್ಲದೇ ಪರಿತಪಿಸುವಂತಾಗಿತ್ತು.

ಈ ಹಿನ್ನಲೆಯಲ್ಲಿ ಕಡಿದ ಪೈಪುಗಳಿಗೆ ಬದಲಾಗಿ ಅಗತ್ಯ ಇರುವಷ್ಟು ಪೈಪುಗಳನ್ನು ಇಲಾಖೆ ಅಳವಡಿಸಿ ಮನೆಗಳಿಗೆ ನೀರು ಪೂರೈಕೆ ಆರಂಭಗೊಂಡಿದೆ. ಕಳೆದ ಒಂದು ವಾರದಿಂದ ನೀರಿಲ್ಲದೆ ಪರದಾಡಿದ್ದ ಕಾಲೊನಿಗೆ ಮರ್ಕಂಜ ಗ್ರಾಮ ಪಂಚಾಯಿತಿ ವತಿಯಿಂದ ವಾಹನಗಳಲ್ಲಿ ನೀರು ತಂದು ಸರಬರಾಜು ಮಾಡಲಾಗುತ್ತಿತ್ತು.

ಸುಮಾರು 15 ವರ್ಷಗಳಿಂದ ಮೈರಾಜೆ ಅರಣ್ಯ ಪ್ರದೇಶದ ಹೊಂಡಗಳಲ್ಲಿ ತುಂಬುವ ನೀರನ್ನು ಪೈಪ್ ಹಾಕಿ ತಂದು ಕುಡಿಯಲು ಮತ್ತು ಇತರ ಉಪಯೋಗಕ್ಕೆ ಬಳಸಲಾಗುತ್ತಿತ್ತು. ಕಾಲೊನಿ ಮಂದಿಯೇ ತಮ್ಮ ಕೈಯಿಂದಲೇ ದುಡ್ಡು ಹಾಕಿ ಇಲ್ಲಿ ಪೈಪ್ ಅಳವಡಿಸಿದ್ದರು.