ಬತ್ತಿದ ಬಾವಿಯಲ್ಲಿ ದಿಢೀರ್ ನೀರು

ಸಾಂದರ್ಭಿಕ ಚಿತ್ರ

ಕಾಲೊನಿ ನಿವಾಸಿಗಳಲ್ಲಿ ಹರ್ಷ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಬೇಸಿಗೆ ಕಾಲ ಆರಂಭವಾಗಲು ಇನ್ನೂ ಕೆಲ ತಿಂಗಳು ಬಾಕಿಯಿರುವಂತೆಯೇ ಕುಂಜತ್ತೂರು ಸಮೀಪದ ತೂಮಿನಾಡು ಕಾಲೊನಿಗಳಲ್ಲಿ ಬಾವಿಗಳು ಬತ್ತಿಹೋಗಿ ಕೊಳವೆ ಬಾವಿಗಳಲ್ಲೂ ನೀರು ಲಭಿಸದೇ ಇರುವ ಮಧ್ಯೆ ಇದೀಗ ಇದೇ ಕಾಲೊನಿಯಲ್ಲಿ 2006-07ರಲ್ಲಿ ಶಾಸಕರ ನಿಧಿಯಿಂದ ನಿರ್ಮಿಸಲಾದ ತಿಂಗಳು ಮೊದಲೇ ಬತ್ತಿಹೋದ ಬಾವಿಯೊಂದರಲ್ಲಿ ಕಾಕತಾಳೀಯವೆಂಬಂತೆ ಆರು ಅಡಿ ನೀರು ತುಂಬಿ ಗ್ರಾಮಸ್ಥರಲ್ಲಿ ಆಚ್ಚರಿ ಮೂಡಿಸಿದೆ.

ನೀರಿಗಾಗಿ ಕಾಲೊನಿ ನಿವಾಸಿಗಳು ಪರದಾಡುತ್ತಿರುವ ಈ ಸಮಯದಲ್ಲಿ ಬಾವಿಯಲ್ಲಿ ದಿಢೀರ್ ನೀರು ತುಂಬಿರುವುದು ಕಾಲೊನಿ ನಿವಾಸಿಗಳಖುಷಿ ತಂದಿದೆ.

ಈ ಕಾಲೊನಿ ನಿವಾಸಿಗಳಿಗೆ ಕೇರಳ ನೀರು ಸರಬರಾಜು ಇಲಾಖೆಯಿಂದ ನೀಡಲಾಗುತ್ತಿರುವ ಕೊಳವೆ ಬಾವಿಯಲ್ಲೂ ಇತ್ತೀಚಿನ ದಿನಗಳಲ್ಲಿ ನೀರಿನ ಅಭಾವ ಕಂಡುಬಂದಿದೆ. ಎರಡು ದಿವಸಕ್ಕೊಮ್ಮೆ ಇಲಾಖೆಯ ವತಿಯಿಂದ ನೀರು ನೀಡಲಾಗುತ್ತದೆ. ಅತ್ಯವಶ್ಯಕ್ಕಾಗಿ ಕೆಲವು ಸಲ ಈ ಕಾಲೊನಿ ವಾಸಿಗಳು ಹಣ ನೀಡಿ ಟ್ಯಾಂಕರಿನಿಂದ ನೀರು ಖರೀದಿಸಬೇಕಾದ ಪರಿಸ್ಥಿತಿಯೂ ಇದೆ.

ಇದೀಗ ಬಾವಿಯಲ್ಲಿ ನೀರು ತುಂಬಿರುವುದಕ್ಕೆ ನಿಖರವಾದ ಕಾರಣಗಳು ತಿಳಿದುಬಂದಿಲ್ಲ. ಹಲವು ಮಂದಿ ಆಗಮಿಸಿ ಬಾವಿಯಲ್ಲಿ ತುಂಬಿದ ನೀರನ್ನು ನೋಡಿ ಹೋಗುತ್ತಿರುವ ದೃಶ್ಯ ಕಂಡು ಬರುತ್ತಿದೆ. ತೂಮಿನಾಡು ಕಾಲೊನಿ ನಿವಾಸಿಗಳಲ್ಲಿ ಬಾವಿಯಲ್ಲಿ ನೀರು ತುಂಬಿರುವುದು ಆಶ್ಚರ್ಯದ ಜತೆಗೆ ಕುತೂಹಲವನ್ನು ಮೂಡಿಸಿದೆ.