ಬತ್ತಿಹೋಗಿದ್ದ ಬಾವಿಯಲ್ಲಿ ದಿಢೀರ್ ನೀರು : ಸಂತಸದಲ್ಲಿ ಸ್ಥಳೀಯರು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಬತ್ತಿ ಹೋಗಿದ್ದ ಬಾವಿಯೊಂದರಲ್ಲಿ 6 ಅಡಿ ನೀರು ರಾತ್ರಿ ಬೆಳಗಾಗುವುದರೊಂದಿಗೆ ತುಂಬಿಕೊಂಡಿರುವುದು ಆಶ್ಚರ್ಯದ ಜತೆಗೆ ಸ್ಥಳೀಯರಲ್ಲಿ ಸಂತಸವನ್ನು ತಂದೊಡ್ಡಿದೆ. ಇದೀಗ ನೀರಿಲ್ಲದೆ ಪರದಾಡುತ್ತಿದ್ದ ಇಲ್ಲಿನ ನಿವಾಸಿಗಳು ಫುಲ್ ಖುಷ್ ಆಗಿದ್ದಾರೆ. ಮಂಜೇಶ್ವರ ಸಮೀಪದ ಗೋವಿಂದ ಪೈ ಕಾಲೇಜು ಸಮೀಪದ ಕಾಲನಿಯೊಂದರ ಸರಕಾರಿ ಬಾವಿಯೊಂದು ನೀರಿಲ್ಲದೆ ಬತ್ತಿ ಹೋಗಿತ್ತು. ಇಲ್ಲಿನ ಆರ್ ಕೆ ಫ್ರಂಡ್ಸ್ ಕ್ಲಬ್ ಹಾಗೂ ಜಿಎಫ್‍ಸಿ ಕ್ಲಬ್ಬಿನ ಸದಸ್ಯರು ಮುಂದಿನ ಭಾನುವಾರ ಬಾವಿಯೊಳಗಿರುವ ಕೆಸರನ್ನು ಮೇಲೆತ್ತಲು ತಯಾರಿ ನಡೆಸಿದ್ದರು. ಇಂದು ಬೆಳಿಗ್ಗೆ ಇಲ್ಲಿನ ನಿವಾಸಿಯೊಬ್ಬರು ಬಾವಿಯೊಳಗೆ ನೋಡಿದಾಗ ಬತ್ತಿ ಹೋಗಿದ್ದ ಬಾವಿಯಲ್ಲಿ 6 ಅಡಿಯಷ್ಟು ನೀರು ತುಂಬಿಕೊಂಡಿದೆ. ವಿಷಯ ತಿಳಿದು ನೂರಾರು ಮಂದಿ ಬಾವಿಯನ್ನು ನೋಡಲು ಆಗಮಿಸುತ್ತಿದ್ದಾರೆ. ಬಾವಿಯಲ್ಲಿ ಪವಾಡವೆಂಬಂತೆ ಒಂದೇ ದಿನದಲ್ಲಿ 6 ಅಡಿ ನೀರು ತುಂಬಿರುವುದು `ನೀರಿಲ್ಲದೆ ಪರದಾಡುತ್ತಿದ್ದ ನಮಗೆ ದೇವರ ಅನುಗ್ರಹವೇ ಸರಿ’ ಎಂದು ಇಲ್ಲಿನ ನಿವಾಸಿಗಳು ಮಾತಾಡಿಕೊಳ್ಳುತ್ತಿದ್ದಾರೆ.