ನಗರಸಭೆಯಲ್ಲಿ ಪ್ರತಿಧ್ವನಿಸಿದ ಕುಡಿಯುವ ನೀರಿನ ಸಮಸ್ಯೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಉಡುಪಿ ನಗರಸಭೆಯ ಮಹಾ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಭಾರೀ ಚರ್ಚೆಗೆ ಗ್ರಾಸವಾಯಿತು. ಈ ಪ್ರಕರಣವನ್ನು ಎತ್ತಿದ ಸದಸ್ಯ ರಮೇಶ್ ಕಾಂಚನ್, “ನಗರದ ಕೆಲವು ಭಾಗಗಳಲ್ಲಿ ಈಗಾಗಲೇ ನೀರಿನ ಸಮಸ್ಯೆ ಎದುರಾಗಿದ್ದು, ಪರಿಹಾರಕ್ಕೆ ನಗರಸಭೆ ಕೈಗೊಂಡಿರುವ ಮಾರ್ಗೋಪಾಯಗಳ ಬಗ್ಗೆ ತಿಳಿದುಕೊಳ್ಳಬೇಕು” ಎಂದು ಬೇಡಿಕೆ ಮುಂದಿಟ್ಟರು.

ಇದೇ ವೇಳೆ ಮಾತನಾಡಿದ ಇನ್ನೊಬ್ಬ ಸದಸ್ಯೆ ನರೀಶ್ಮಾ ನಾಯಕ್, “ನಗರಸಭೆಯು ನೀರಿನ ಸಮಸ್ಯೆಗೆ ಮಾರ್ಚ್ ಅಥವಾ ಎಪ್ರಿಲ್ ತಿಂಗಳಲ್ಲಿ ಕ್ರಮ ಕೈಗೊಳ್ಳುವ ಬದಲು ಈಗಿನಿಂದಲೇ ಈ ಸಮಸ್ಯೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು, ಏಕೆಂದರೆ ಮಾರ್ಚ್ ಅಥವಾ ಎಪ್ರಿಲ್ ತಿಂಗಳಲ್ಲಿ ನೀರಿನ ಸಮಸ್ಯೆ ತೀರಾ ಬಿಗಡಾಯಿಸಿರುತ್ತದೆ” ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಸಹಾಯಕ ಇಂಜಿನಿಯರ್ ಶಶಿಧರ್ ಹೆಗ್ಡೆ, “ಸ್ವರ್ಣ ನದಿಯ ಒಳಹರಿವು ಮುಂದಿನ ಕೆಲವೇ ದಿನಗಳಲ್ಲಿ ಇಳಿಕೆಯಾಗುವ ಸಾಧ್ಯೆತಗಳು ಕಂಡುಬಂದಿದ್ದು, ಹಾಗಾಗಿ ನಗರಸಭೆ ಸ್ವರ್ಣ ನದಿಯ ಬಜೆ ಮತ್ತು ಶಿರೂರು ಅಣೆಕಟ್ಟುಗಳಲ್ಲಿ ನೀರು ಸಂಗ್ರಹಣಾ ಕ್ರಮಗಳನ್ನು ಕೈಗೊಂಡಿದೆ” ಎಂದು ಹೇಳಿದರು.

“ಸ್ವರ್ಣ ನದಿಯ ಶಿರೂರು ಅಣೆಕಟ್ಟಿನಲ್ಲಿ ಹಿಂದೆ ನಿರ್ಮಿಸಿದ್ದ 0.8 ಮೀಟರ್ ಅಂತರದ ಬಂದ್  ಬದಲಾಗಿ 1.2 ಮೀಟರ್ ಬಂದ್ ನಿರ್ಮಿಸಲಾಗಿದೆ. ಇದೇ ರೀತಿ ನೀರು ಸಂಗ್ರಹಕ್ಕೆ ಮುಂದೆ ಬಜೆ ಕಿರು ಜಲ ವಿದ್ಯುತ್ ಅಣೆಕಟ್ಟಿನಲ್ಲೂ ಕ್ರಮ ಕೈಗೊಳ್ಳಲಾಗುವುದು. ಇದರಿಂದ ಶಿರೂರು ಮತ್ತು ಬಜೆ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಸಾಮಥ್ರ್ಯ ಗಣನೀಯವಾಗಿ ಹೆಚ್ಚಾಗಲಿದೆ” ಎಂದು ಹೆಗ್ಡೆ ವಿವರಿಸಿದರು.

“ಈಗಾಗಲೇ ನಗರದ ವಿವಿಧ ಭಾಗಗಳಲ್ಲಿ ಸುಮಾರು 42 ಬಾವಿಗಳು ಮತ್ತು ಕೊಳವೆ ಬಾವಿಗಳನ್ನು ಗುರುತಿಸಲಾಗಿದೆ. ಇವುಗಳನ್ನು ಪುನರುಜ್ಜೀವಗೊಳಿಸಿ ನೀರಿನ ಸಮಸ್ಯೆ ಎದುರಾದಾಗ ಇವುಗಳಿಂದ ನೀರು ಪೂರೈಸಲಾಗುವುದು” ಎಂದು ಪುರಸಭಾ ಆಯುಕ್ತ ಡಿ ಮಂಜುನಾಥಯ್ಯ ಹೇಳಿದರು.