ಮುಲ್ಕಿಯಲ್ಲಿ ಉಲ್ಬಣಿಸಿದ ಕುಡಿಯುವ ನೀರು ಸಮಸ್ಯೆ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಬಿಸಿಲಿನ ತಾಪ ಏರುತ್ತಿದ್ದಂತೆ ಮುಲ್ಕಿ ನಗರಪಂಚಾಯತಿ ಸಹಿತ ಅನೇಕ ಪಂಚಾಯತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಲು ಶುರುವಾಗಿದ್ದು ಮುಲ್ಕಿ ನಗರ ಪಂಚಾಯತಿ ಸಮಸ್ಯೆಯನ್ನು ತಿಳಿಗೊಳಿಸಲು ಹರಸಾಹಸಪಡುತ್ತಿದೆ.

ಮುಲ್ಕಿ ನಗರಪಂಚಾಯತಿ ವ್ಯಾಪ್ತಿಯ ಅತೀ ಹೆಚ್ಚು ಜನಸಂಖ್ಯೆ ಇರುವ ಕೆ ಎಸ್ ರಾವ್ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಪರೀತ ಕಾಡುತ್ತಿದ್ದು ಮಂಗಳೂರಿನ ತುಂಬೆಯಿಂದ ಮೂಲ್ಕಿಗೆ ಬರುವ ನೀರು ಕುಳಾಯಿ ಪಂಪ್ ಹೌಸಿನಿಂದ 5 ದಿನಕ್ಕೊಮ್ಮೆ ಬರುತ್ತಿದೆ. ಇದರಿಂದ ಮೂಲ್ಕಿ ಜನತೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಮುಲ್ಕಿಗೆ ಬರುವ ನೀರಿನಲ್ಲೂ ಹಳೆಯಂಗಡಿ, ಪಡುಪಣಂಬೂರು,ಸಸಿಹಿತ್ಲು ಪ್ರದೇಶದವರು ನಡುವಿನಲ್ಲಿ ನೀರು ತೆಗೆಯುತ್ತಿರುವುದರಿಂದ ಮುಲ್ಕಿಗೆ ಬರುವ ನೀರಿನಲ್ಲಿ ವ್ಯತ್ಯಯವಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದೆ.

ಮುಲ್ಕಿಯ ಅತೀ ಹೆಚ್ಚಿನ ಜನಸಾಂದ್ರತೆ ಪ್ರದೇಶವಾದ ಕೆ ಎಸ್ ರಾವ್ ನಗರದ ಬಿಜಾಪುರ ಕಾಲನಿ ಪ್ರದೇಶಗಳಿಗೆ ಸದ್ಯಕ್ಕೆ ಎರಡು ಟ್ಯಾಂಕರಿನಲ್ಲಿ ಪಣಂಬೂರು ಪ್ರದಶಗಳಿಂದ ಸುಮಾರು 1 ಲಕ್ಷ ಗ್ಯಾಲನ್ ನೀರು ಎರಡು ದಿನಕ್ಕೊಮ್ಮೆ ವಿತರಣೆಯಾಗುತ್ತಿದೆ. ಆದರೆ ಟ್ಯಾಂಕರ್ ನೀರಿಗೆ ಪಾತ್ರೆಗಳನ್ನು ತೆಗೆದಿಟ್ಟುಕೊಂಡು ಜನತೆ ಗಂಟೆಗಟ್ಟಲೆ ಕಾಯಬೇಕಾದ ಪರೀಸ್ಥಿತಿ ಬಂದಿದೆ.

ಕೆ ಎಸ್ ರಾವ್ ನಗರದಲ್ಲಿ ಎರಡು ಕೊಳವೆಬಾವಿಗಳನ್ನು ನಗರಪಂಚಾಯತಿ ವತಿಯಿಂದ ತೋಡಿದರೂ ಪರಿಸ್ಥಿತಿ ನಿರಾಶಾದಾಯಕವಾಗಿದೆ. ಇದೇ ರೀತಿ ಮುಂದುವರಿದರೆ ಮುಂದಿನ ಮೇ ತಿಂಗಳಲ್ಲಿ ನೀರಿನ ಸಮಸ್ಯೆ ವಿಪರೀತವಾಗಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇದೇ ರೀತಿ ಮೂಲ್ಕಿ ಹೋಬಳಿಯ ಪಂಚಾಯತಿಗಳಾದ  ತಿಕಾರಿಬೆಟ್ಟು, ಕೆಮ್ರಾಲ್, ಹಳೆಯಂಗಡಿ, ಐಕಳ, ಕಿಲ್ಪಾಡಿ ಸಹಿತ ಅನೇಕ ಕಡೆಗಳಲ್ಲಿ ನೀರಿನ ಅಭಾವ ತಲೆದೋರಿದ್ದು ಪಂಚಾಯತಿ ಪ್ರತಿನಿಧಿಗಳು ಸಮಸ್ಯೆ ಬಗೆಹರಿಸಲು ಕಸರತ್ತು ನಡೆಸುತ್ತಿದ್ದಾರೆ.

ಕೈಗಾರಿಕಾ ಪ್ರದೇಶದ ಉದ್ಯಮಿಗಳಿಂದ ಸಮಸ್ಯೆ

ಮುಲ್ಕಿ ನಗರಪಂಚಾಯತಿ ವ್ಯಾಪ್ತಿಯ ಕೆ ಎಸ್ ರಾವ್ ನಗರಕ್ಕೇ ತಾಗಿಕೊಂಡೇ ಇರುವ ಕೈಗಾರಿಕಾ ಪ್ರದೇಶದಲ್ಲಿ ಕೆಲ ಉದ್ಯಮಿಗಳು ಅಲ್ಲಲ್ಲಿ ಕೊಳವೆಬಾವಿಗಳನ್ನು ತೋಡುತ್ತಿರುವುದರಿಂದ ಬಾವಿಗಳು ಬತ್ತಿಹೋಗಿದ್ದು ನೀರಿನ ಸಮಸ್ಯೆ ಕಾಡುತ್ತಿದೆ ಎಂದು ಬಿಜಾಪುರ ಕಾಲನಿಯ ವಾಸಿಗಳು ದೂರಿದ್ದಾರೆ.

ಜಲಸಂರಕ್ಷಣೆ ಮಾಡಲು ಎಲ್ಲರೂ ಸಂಘಟಿತ ಹೋರಾಟವನ್ನೇ ನಡೆಸಬೇಕಾಗಿದೆ.