ಪೈಪ್ ಒಡೆದು ನೀರು ಸೋರಿಕೆ

ಪೈಪ್ ಲೈನ್ ಒಡೆದು ನೀರು ಹರಿಯುತ್ತಿರುವುದು

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಇಲ್ಲಿನ ಪುರಸಭಾ ನೀರು ಸರಬರಾಜಾಗುವ ಪೈಪ್ ಒಡೆದು ಏಕಾಏಕಿ ನೀರು ಹರಿದು ಬಂದ ಘಟನೆ ಪಾಣೆಮಂಗಳೂರು ಪೇಟೆಯಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

ಪಾಣೆಮಂಗಳೂರು ಪೇಟೆಯ ವಿವೇಕ್ ಸ್ವೀಟ್ಸ್ ಸ್ಟಾಲ್ ಮುಂಭಾಗದಲ್ಲಿ ಭೂಮಿಯ ಅಡಿಭಾಗದಿಂದ ಏಕಾಏಕಿ ನೀರು ಮೇಲೆ ಚಿಮ್ಮಲು ಪ್ರಾರಂಭಿಸಿದ್ದು, ಯಾವ ಕಾರಣದಿಂದ ನೀರು ಬರುತ್ತದೆ ಎಂಬುದು ಸ್ಥಳೀಯರಿಗೆ ಗೊತ್ತಾಗುವಷ್ಟರಲ್ಲಿ ರಸ್ತೆ ಬದಿಯ ತೋಡಿನಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿಯಲಾರಂಭಿಸಿದೆ. ನೀರಿನ ರಭಸ ಎಷ್ಟರ ಮಟ್ಟಿಗೆ ಇತ್ತು ಎಂದರೆ ನೀರು ಚಿಮ್ಮಿ ಬರುತ್ತಿದ್ದ ಜಾಗದಲ್ಲಿ ಡಾಮರು ರಸ್ತೆಯೇ ಎದ್ದು ಬಂದ ಅನುಭವ ಆಗುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಬಗ್ಗೆ ಸ್ಥಳೀಯರು ತಕ್ಷಣ ಪುರಸಭಾಧಿಕಾರಿಗಳ ಗಮನಕ್ಕೆ ತಂದರಾದರೂ ತಡರಾತ್ರಿ ಆಗಿರುವುದರಿಂದ ಯಾರೂ ಕೂಡಾ ಸ್ಥಳಕ್ಕೆ ಆಗಮಿಸಲಿಲ್ಲ. ಆದರೆ ಕ್ರಮೇಣ ನೀರಿನ ರಭಸ ಕಡಿಮೆಯಾದುದರಿಂದ ಜನ ನಿಟ್ಟುಸಿರು ಬಿಟ್ಟರು.

ಪುರಸಭಾ ವ್ಯಾಪ್ತಿಯಲ್ಲಿ ಈಗಾಗಲೇ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಹೊಸ ಪೈಪ್ ಲೈನ್ ಕಾಮಗಾರಿ ಮುಗಿದಿದ್ದು, ಈ ಪೈಪ್ ಲೈನ್ ಮೂಲಕ ನೀರು ಹರಿಯಬಿಟ್ಟು ಪರೀಕ್ಷೆ ಮಾಡಿದ ಹಿನ್ನೆಲೆಯಲ್ಲಿ ಇಷ್ಟೊಂದು ರಭಸದಿಂದ ನೀರು ಬಂದ ಪರಿಣಾಮ ಪೈಪ್ ಹಾನಿಯಾಗಿ ಈ ರೀತಿ ಆಗಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಶಂಕಿಸಿದ್ದಾರೆ.