ಪಂಚಾಯತಿಗಳಲ್ಲಿ ಜಲಸಂರಕ್ಷಣೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಬೇಸಿಗೆಯಲ್ಲಿ ನೀರಿನ ಸಮಸ್ಯೆ ಪರಿಹರಿಸಲು ಜಿಲ್ಲೆಯ ಪ್ರತೀ ಗ್ರಾಮ ಪಂಚಾಯತಿಗಳಲ್ಲಿ ನೀರಿನ ಸಂಗ್ರಹ, ಜಲಸಂರಕ್ಷಣೆ ಮತ್ತು ನೀರು ಇಂಗಿಸುವಿಕೆಗೆ ಹೆಚ್ಚು ಒತ್ತು ನೀಡಲು ಸೂಚಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ ಆರ್ ರವಿ ತಿಳಿಸಿದ್ದಾರೆ.

ಅವರು ಬುಧವಾರ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಸಾಂಪ್ರದಾಯಿಕವಾಗಿ ನೀರಿನ ಸಂರಕ್ಷಣೆಯ ವಿಧಾನಕ್ಕೆ ಸಾರ್ವಜನಿಕರಿಂದ ಹೆಚ್ಚು ಒಲವು ವ್ಯಕ್ತವಾಗಿದೆ. ಪ್ರಾಕೃತಿಕವಾಗಿ ಹರಿಯುವ ನೀರನ್ನು ಸ್ಥಳೀಯವಾಗಿ ಸಂರಕ್ಷಿಸಿದರೆ ಆ ಪ್ರದೇಶದಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ. ಈ ನಿಟ್ಟಿನಲ್ಲಿ ಕಟ್ಟೆಪುಣಿ ವಿಧಾನದಲ್ಲಿ ಹರಿಯುವ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ವಿಧಾನಕ್ಕೆ ಉದ್ಯೋಗಖಾತ್ರಿ ಯೋಜನೆಯ ಮೂಲಕ ಅನುಷ್ಠಾನಕ್ಕೆ ತರಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 500ಕ್ಕೂ ಅಧಿಕ ಕಟ್ಟೆಪುಣಿ ನಿರ್ಮಾಣಕ್ಕೆ ಪ್ರಸ್ತಾವನೆ ಬಂದಿರುವುದಾಗಿ ಅವರು ಹೇಳಿದರು.

ನೀರಿನ ಸಂರಕ್ಷಣೆಯ ಮೂಲಗಳನ್ನು ಕಂಡು ಹುಡುಕಿ ಅದರ ಯೋಜನೆ ಕಾರ್ಯಾನುಷ್ಠಾನಕ್ಕೆ ಗ್ರಾಮ ಪಂಚಾಯತಿಗಳು ಅಧ್ಯತೆ ನೀಡಬೇಕು. ಇದರಲ್ಲಿ ನಿರ್ಲಕ್ಷ್ಯವಹಿಸಿದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ ಮಳೆಗಾಲದಲ್ಲಿ ಶೇಕಡಾ 76ರಷ್ಟು ಮಳೆ ಸುರಿದಿದ್ದು, ಶೇ 24 ಮಳೆ ಕೊರತೆಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ರಾಜ್ಯ ಸರಕಾರದ ನೂತನ ನಿಯಮದ ಪ್ರಕಾರ ವಿವಿಧ ಕಾಮಗಾರಿ ಗುತ್ತಿಗೆಗಳಲ್ಲಿ ಶೇಕಡಾ 25ರಷ್ಟು ಕಾಮಗಾರಿಗಳನ್ನು ಕಡ್ಡಾಯವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಿಡಬೇಕಾಗಿದೆ. ಇದರನ್ವಯರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಸೂಚಿಸಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ನಿಗದಿತ ಅವಧಿಯಲ್ಲಿ ಪರಿಶಿಷ್ಟರ ಕಲ್ಯಾಣ ಕಾರ್ಯಕ್ರಮಗಳ ಅನುದಾನ ಬಳಕೆ ಮಾಡದಿದ್ದರೆ ಅಂತಹ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಲು ನಿಯಮದಲ್ಲಿ ಅವಕಾಶವಿದೆ ಎಂದು ಹೇಳಿದರು.

ಗರ್ಭಿಣಿಯರಿಗೆ ಅಂಗನವಾಡಿಗಳಲ್ಲಿ ಪೌಷ್ಠಿಕ ಆಹಾರ ಒದಗಿಸುವ `ಮಾತೃಪೂರ್ಣ’ ಯೋಜನೆ ಅಕ್ಟೋಬರ್ 2ರಿಂದ ಜಾರಿಗೆ ಬರಲಿದೆ. ಗರ್ಭಿಣಿಯರಿಗೆ ಹಾಲು, ಮೊಟ್ಟೆ ಸೇರಿದಂತೆ ಉತ್ತಮ ದರ್ಜೆಯ ಪೌಷ್ಠಿಕ ಆಹಾರವನ್ನು ಒದಗಿಸಲಾಗುವುದು. ಇದಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಹೆಚ್ಚುವರಿ ವೇತನ ನೀಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಸುಂದರ ಪೂಜಾರಿ ಸಭೆಗೆ ಮಾಹಿತಿ ನೀಡಿದರು.