ನಗರದಲ್ಲಿ ನೀರು ಸಂಪರ್ಕ ಸಮೀಕ್ಷೆ ಪ್ರಾರಂಭ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯು ನಗರದಲ್ಲಿ ನೀರು ಸಂಪರ್ಕ ಸಮೀಕ್ಷೆ ಕಾರ್ಯವನ್ನು ಆರಂಭಿಸಿದ್ದು, ಗ್ರಾಹಕರ ವಿವರವನ್ನು ಅಂಕಿ ಅಂಶ ಆಧಾರದಲ್ಲಿ ಸಂಗ್ರಹಿಸುವ ನಿಟ್ಟಿನಲ್ಲಿ ಮನಪಾದ ನೀರು ಸಂಪರ್ಕಗಳ ಬಗ್ಗೆ ಸಮೀಕ್ಷೆಯನ್ನು ನಡೆಸಲಿದೆ. ಈ ಸಮೀಕ್ಷೆಯಲ್ಲಿ ಗ್ರಾಹಕರ ವಿವರವನ್ನು ಕಟ್ಟಡಗಳ ಭಾವಚಿತ್ರ ಮತ್ತು ನೀರು ಪೂರೈಕೆ ಮತ್ತು ನಿರ್ವಹಣೆಯ ಇತ್ತೀಚಿನ ಅಂಕಿ ಅಂಶಗಳ ಸಹಿತ ಮಾಹಿತಿ ಸಂಗ್ರಹಿಸಲಿದೆ.

ಈ ಸಮೀಕ್ಷೆ ಪೂರ್ಣಗೊಂಡರೆ ಗ್ರಾಹಕರಿಗೆ ಮನಪಾ ವೆಬ್ ಸೈಟಿನಲ್ಲಿ ಅಂಕಿ ಅಂಶ ಲಭ್ಯವಾಗುವಂತೆ ಮಾಡಲು ಅಧಿಕಾರಿಗಳು ಯೋಜನೆ ಹಾಕಿದ್ದಾರೆ. ಇದು ಕೇವಲ ನೋಂದಾವಣೆಯಾದ ಬಳಕೆದಾರರಿಗೆ ಮಾತ್ರ ಮಾಡಲಾಗುತ್ತದೆ. ಈ ಸಮೀಕ್ಷೆಯನ್ನು ಮನಪಾದ ವಿವಿಧೋದ್ದೇಶ ಕೆಲಸಗಾರರು ಮಾಡುತ್ತಿದ್ದಾರೆ. ಸಮೀಕ್ಷೆ ಮುಂದಿನ ತಿಂಗಳಾಂತ್ಯಕ್ಕೆ ಕೊನೆಗೊಳ್ಳಲಿದೆ.

“ಸುಮಾರು 60 ಮಂದಿ ವಿವಿಧೋದ್ದೇಶ ಕೆಲಸಗಾರರನ್ನು 16 ಮಂದಿ ಮೇಲ್ವಿಚಾರಕರೊಂದಿಗೆ ಸಮೀಕ್ಷೆಗೆ ನಿಯೋಜಿಸಿದ್ದೇವೆ. ಪ್ರತಿ ಕೆಲಸಗಾರರಿಗೆ ದಿನಕ್ಕೆ 50 ಕಟ್ಟಡಗಳನ್ನು ಸಮೀಕ್ಷೆಗೆ ಒಳಪಡಿಸುವ ಗುರಿಯನ್ನು ನೀಡಲಾಗಿದೆ, ಇದುವರೆಗೆ 10,000 ಸಂಪರ್ಕಗಳು ದಾಖಲಾಗಿವೆ” ಎಂದು ನೀರು ಪೂರೈಕೆ ಕಾರ್ಯಕಾರಿ ಇಂಜಿನಿಯರ್ ಕೆ ಎಸ್ ಲಿಂಗೇಗೌಡ ಹೇಳಿದ್ದಾರೆ.

ವಿವಿಧೋದ್ದೇಶ ಕಾರ್ಯಕರ್ತರು ಪ್ರತಿ ಕಟ್ಟಡಗಳಿಗೆ ತೆರಳಿ ನೀರು ಸಂಪರ್ಕದ ಅನುಕ್ರಮ ಅಂಕಿಅಂಶ, ಮೀಟರ್ ನಂಬರ್, ಕಟ್ಟಡ ಮಾಲಿಕನ ಹೆಸರು ಮತ್ತು ಆರ್ ಆರ್ ನಂಬರ್, ವಿದ್ಯುತ್ ಸಂಪರ್ಕ ಇತ್ಯಾದಿಯನ್ನು ಸಂಗ್ರಹಿಸುತ್ತಾರೆ. ಈ ಎಲ್ಲಾ ಮಾಹಿತಿಯೊಂದಿಗೆ ಕಟ್ಟಡದ ಫೋಟೋವನ್ನು ಸ್ಥಳದಲ್ಲಿಯೇ ಟ್ಯಾಬ್ಲೆಟ್ ಪಿಸಿ ಮೂಲಕ ಸೆರೆಹಿಡಿಯುತ್ತಾರೆ.

ಭವಿಷ್ಯದಲ್ಲಿ ನೀರು ಪೂರೈಕೆ ಯೋಜನೆಗಳಿಗೆ ಡಿಜಿಟಲ್ ಡಾಟಾ ಸಂಗ್ರಹಣೆ ಬಹಳ ಉಪಯೋಗವಾಗಲಿದ್ದು, ಗ್ರಾಹಕರು ಈ ಬಗ್ಗೆ ಯಾವುದೇ ಸಂಶಯಗಳನ್ನು ಪರಿಹರಿಸಿಕೊಳ್ಳಲು ಬಯಸಿದ್ದರೆ ನೀರು ಪೂರೈಕೆ ಸಹಾಯಕ ಕಾರ್ಯಕಾರಿ ಇಂಜಿನಿಯರನ್ನು 9448502777 ನಂಬರಿನಲ್ಲಿ ಸಂಪರ್ಕಿಸಬಹುದು.