ಮೇಟಿಗೆ ಬ್ಲ್ಯಾಕ್ಮೇಲ್ ಮಾಡಲಾಗಿತ್ತೇ ? ರೂ 10 ಕೋಟಿ ಸಂದಾಯವಾಗಿತ್ತೇ ?

ವಿಶೇಷ ವರದಿ

ಬೆಂಗಳೂರು : ಮಾಜಿ ಸಚಿವ ಎಚ್ ವೈ ಮೇಟಿ ರಾಸಲೀಲೆ ಸೀಡಿ ಬಹಿರಂಗವಾಗದಂತೆ ತಡೆಯಲು ಬರೋಬ್ಬರಿ ಹತ್ತು ಕೋಟಿ ರೂಪಾಯಿ ವೆಚ್ಚ ಮಾಡಲಾಗಿತ್ತಾದರೂ  ಹಣ ಪಡೆದವರು ಮತ್ತೂ ತಮ್ಮ ಬ್ಲ್ಯಾಕ್ಮೇಲ್ ತಂತ್ರಗಾರಿಕೆಯನ್ನು ಮುಂದುವರಿಸಿದ ಪರಿಣಾಮ ಅದು ಕೊನೆಗೂ ಬಹಿರಂಗವಾಯಿತೆಂದು ಹೇಳಲಾಗುತ್ತಿದೆ. ಪ್ರಕರಣವನ್ನು ಸಿಐಡಿ ವಿವಿಧ ಕೋನಗಳಿಂದ ತನಿಖೆ ಮುಂದುವರಿಸಿರುವಂತೆಯೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚೆಯಾಗುತ್ತಿದೆ.

ಇದೊಂದು ಹನಿ ಟ್ರ್ಯಾಪ್ ಪ್ರಕರಣವಾಗಿರುವ ಸಾಧ್ಯತೆಯ ಬಗ್ಗೆಯೂ ಸಿಐಡಿ ತನಿಖೆ ನಡೆಸುತ್ತಿದ್ದು ಸೀಡಿ ಮುಂದಿಟ್ಟುಕೊಂಡು  ಮೇಟಿಯನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದರೆನ್ನಲಾದ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ಕಾರ್ಯವೂ ಮುಂದುವರಿದಿದೆ. ಸೀಡಿ ತಯಾರಿಸಿದವರು  ಹಾಗೂ ಅದರ ಮೂಲಕ  ಮೇಟಿಯನ್ನು ತಮ್ಮ ತಾಳಕ್ಕೆ ತಕ್ಕಂತೆ ಆಡಿಸಲು ಹಲವರು ಪ್ರಯತ್ನಿಸಿದ್ದಿರಬಹುದೆಂಬ ಶಂಕೆಯಿಂದೆ.

ಮೂಲಗಳ ಪ್ರಕಾರ ಸೀಡಿಯನ್ನು ಬಹಳ ಹಿಂದೆಯೇ ತಯಾರಿಸಲಾಗಿದ್ದು ರಾಜೀನಾಮೆ ನೀಡಿದ್ದ ಮಹಿಳಾ ಪೊಲೀಸ್ ಅಧಿಕಾರಿಯನ್ನು ಮರು ನೇಮಿಸಬೇಕು, ನಿಗಮ ಮಂಡಳಿಗಳಿಗೆ ಕೂಡ ತಮಗೆ ಬೇಕಾದವರಿಗೆ ನೇಮಕ ಮಾಡಬೇಕು ಹಾಗೂ 10 ವೈನ್ ಸ್ಟೋರುಗಳಿಗೆ ಪರವಾನಗಿ ನೀಡಬೇಕೆಂಬುದು  ಮಾಜಿ ಸಚಿವನನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಮಂದಿ  ಇರಿಸಿದ್ದ ಬೇಡಿಕೆಯಾಗಿದ್ದು ಇವುಗಳು ಪೂರೈಕೆಯಾಗದೇ ಇದ್ದಾಗ ಸೀಡಿ ಬಹಿರಂಗಗೊಂಡಿದೆ.

ಇನ್ನೊಂದು ಮೂಲದ ಪ್ರಕಾರ ಸೀಡಿ ಬಹಿರಂಗಗೊಳಿಸಿದ ಆರ್ಟಿಐ ಕಾರ್ಯಕರ್ತ, ಸಿಡಿಯಲ್ಲಿ ಕಾಣಿಸಿಕೊಂಡಿರುವ ಮಹಿಳೆ ಹಾಗೂ ಸೀಡಿ ತಯಾರಿಸಿದ್ದನೆನ್ನಲಾದ ಸಚಿವರ ಅಂಗರಕ್ಷಕ ಕೂಡ ಭಾರೀ ಮೊತ್ತ ಪಡೆದಿರುವ ಸಾಧ್ಯತೆಯಿದೆ ಹಾಗೂ ಆತ ಸರಕಾರಿ ನೌಕರನಾದರೂ  ಈ ಪ್ರಕರಣದಿಂದ ತನ್ನ ಕೆಲಸ ಕಳೆದುಕೊಳ್ಳುವ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ಮೇಟಿ ಹಾಗೂ ಅವರನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ವ್ಯಕ್ತಿಗಳ ನಡುವೆ ಸಂಧಾನವೇರ್ಪಡಿಲು ಇಬ್ಬರು ಶಾಸಕರು ಕೆಲಸ ಮಾಡಿದ್ದಾರೆನ್ನಲಾಗಿದೆ. ಮೇಟಿ ಸೆಕ್ಸ್ ಸೀಡಿಯೊಂದಿದೆಯೆಂದು ಬೆಳಗಾವಿ ಅಧಿವೇಶನದ ಸಂದರ್ಭ ತಿಳಿದು ಬಂದ ಕಾರಣ ಈ ಇಬ್ಬರು ಶಾಸಕರಿಗೆ ಅದನ್ನು ಬಹಿರಂಗಗೊಳಿಸದೇ ಇರುವಂತೆ ಪ್ರಯತ್ನಿಸುವ ಜವಾಬ್ದಾರಿ ವಹಿಸಲಾಗಿತ್ತೆಂದು ಹೇಳಲಾಗುತ್ತಿದ್ದು ಅವರ ಪ್ರಯತ್ನಗಳೆಲ್ಲವೂ ಸೀಡಿ ಹಿಂದಿದ್ದವರಿಗೆ ಬ್ಲ್ಯಾಕ್ಮೇಲ್ ತಂತ್ರಗಾರಿಕೆ ನಡೆಸಲು ಅನುವು ಮಾಡಿಕೊಟ್ಟಿತ್ತು ಹಾಗೂ ಹಣದ ಬೇಡಿಕೆ ಹೆಚ್ಚುತ್ತಲೇ ಹೋಗಿತ್ತೆಂದು ತಿಳಿದುಬಂದಿದೆ. ಆದರೆ ಇದೀಗ ಸಿಡಿ ಬಹಿರಂಗಗೊಂಡಂದಿನಿಂದ ಅದು ಬಿಡುಗಡೆಯಾಗದಂತೆ ತೆರೆಮರೆಯಲ್ಲಿ ಪ್ರಯತ್ನಿಸಿದ್ದವರೆಲ್ಲಾ ಮೌನವಾಗಿದ್ದಾರೆ.

ಈ ಸೀಡಿಯನ್ನು ಮೊದಲು ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದ ಕಾರಣವೇನು, ಸಂತ್ರಸ್ತ ಮಹಿಳೆ ತನ್ನ ಹೇಳಿಕೆಗಳನ್ನು ಬದಲಿಸಲು ಕಾರಣವೇನು, ಇದೊಂದು ಹನಿ ಟ್ರ್ಯಾಪ್ ಪ್ರಕರಣವೇ  ಎಂಬ ಬಗ್ಗೆಯ ತನಿಖೆ ಮುಂದುವರಿದಿದ್ದು,  ಮೇಟಿ ವಿರುದ್ದ ವ್ಯೂಹ ರಚಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಹಲವರು ಪ್ರಯತ್ನಿಸಿರುವ ಸಾಧ್ಯತೆ ಇದೆ ಎನ್ನಲಾಗತ್ತಿದೆ.

ಅಂತಿಮವಾಗಿ ಈ ಪ್ರಕರಣ ವಿಪಕ್ಷಗಳ ಕೈಗೆ ಆಡಳಿತ ಪಕ್ಷದ ಮೇಲೆ ದಾಳಿ ನಡೆಸಲು ಒಂದು  ಅಸ್ತ್ರ ಒದಗಿಸಿದ್ದರೆ, ಕಾಂಗ್ರೆಸ್ ಪಕ್ಷದೊಳಗಿನ ಸಿದ್ದರಾಮಯ್ಯ ವಿರೋಧಿಗಳೂ ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆನ್ನಲಾಗಿದೆ.