ಯಮನ್ನಿಗೆ ವೈಮಾನಿಕ ದಾಳಿ : ಸೌದಿಯಿಂದ ಯುದ್ಧಾಪರಾಧ

ದುಬೈ : ಯಮನ್ ದೇಶದ ಮೇಲೆ ಯುದ್ಧ ಸಾರಿರುವ ಸೌದಿ ಅರೇಬಿಯಾ ಮತ್ತು ಮಿತ್ರ ರಾಷ್ಟ್ರಗಳು ಕಳೆದ ಎರಡು ತಿಂಗಳಲ್ಲಿ ಈ ಪುಟ್ಟ ದೇಶದ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ 39 ನಾಗರಿಕರು ಮೃತಪಟ್ಟಿದ್ದು, 26 ಮಕ್ಕಳು ಗಾಯಗೊಂಡಿದ್ದಾರೆ. ಈ ದಾಳಿಯ ಮೂಲಕ ಸೌದಿ ಅರೇಬಿಯಾ ಯುದ್ಧಾಪರಾಧಕ್ಕೆ ಗುರಿಯಾಗುತ್ತದೆ ಎಂದು ಹ್ಯೂಮನ್ ರೈಟ್ಸ್ ವಾಚ್ ಸಂಘಟನೆ ಹೇಳಿದೆ.

ಉದ್ದೇಶಪೂರ್ವಕವಾಗಿ ನಡೆದ ವೈಮಾನಿಕ ದಾಳಿಯಲ್ಲಿ ನಾಲ್ಕು ಕುಟುಂಬಗಳು ಸರ್ವನಾಶವಾಗಿದ್ದು, ಅನೇಕ ನಾಗರಿಕರ ಆಸ್ತಿಪಾಸ್ತಿ ನಷ್ಟವಾಗಿದೆ. ಆದರೆ ಈ ಆರೋಪಗಳನ್ನು ಅಲ್ಲಗಳೆದಿರುವ ಸೌದಿ ಸರ್ಕಾರ ತನ್ನ ಸೇನೆ ಯಮನ್ನಿನಲ್ಲಿ ಸಶಸ್ತ್ರ ಹೌತಿ ಚಳುವಳಿಯ ವಿರುದ್ಧ ಮಾತ್ರ ಯುದ್ಧ ಸಾರಿದೆ, ನಾಗರಿಕರ ವಿರುದ್ಧ ಅಲ್ಲ ಎಂದು ಹೇಳಿದೆ. ಕಾನೂನು ಬದ್ಧವಾಗಿ ವೈಮಾನಿಕ ದಾಳಿ ನಡೆಸುವುದಾಗಿ ಸೌದಿ ಸರ್ಕಾರ ಹೇಳಿದ್ದರೂ ಪದೇ ಪದೇ ನಾಗರಿಕರ ಸಾವಿಗೆ ಕಾರಣವಾಗುತ್ತಿದೆ ಎಂದು ಸಂಘಟನೆ ಹೇಳಿದೆ.

ಸಶಸ್ತ್ರ ಹೋರಾಟದಲ್ಲಿ ಮಡಿದ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸೌದಿ ಮೈತ್ರಿಕೂಟವನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಹ್ಯೂಮನ್ ರೈಟ್ಸ್ ಸಂಘಟನೆ ವಿಶ್ವಸಂಸ್ಥೆಯನ್ನು ಕೋರಿದೆ. ಈವರೆಗೂ ಯುದ್ಧದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಮೂವತ್ತು ಲಕ್ಷಕ್ಕೂ ಹೆಚ್ಚು ಜನರು ತಮ್ಮ ನೆಲೆ ಕಳೆದುಕೊಂಡಿದ್ದಾರೆ. ಈವರೆಗೂ ವಿಶ್ವಸಂಸ್ಥೆ ಯುದ್ಧದಲ್ಲಿ ಮಡಿದ 5144 ನಾಗರಿಕರ ಸಾವಿನ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು, ಅಂತಾರಾಷ್ಟ್ರೀಯ ತನಿಖೆ ತುರ್ತು ಅಗತ್ಯವಾಗಿದೆ ಎಂದು ಹೇಳಲಾಗಿದೆ.