ಚೀನಾದಲ್ಲಿ ಭ್ರಷ್ಟರ ವಿರುದ್ಧ ಸಮರ

ಚೀನಾ ಸರ್ಕಾರದ ಭ್ರಷ್ಟಾಚಾರ ವಿರೋಧಿ ಅಭಿಯಾನದ ಫಲವಾಗಿ 250ಕ್ಕೂ ಹೆಚ್ಚು ಉನ್ನತ ಅಧಿಕಾರಿಗಳು ಶಿಕ್ಷೆಗೊಳಗಾಗಿದ್ದು ಇವರಲ್ಲಿ ಸೇನಾಧಿಕಾರಿಗಳು, ಕಾರ್ಪೊರೇಟ್ ಉದ್ಯಮಿಗಳೂ ಸೇರಿದ್ದಾರೆ.

ಐದು ವರ್ಷಕ್ಕೊಮ್ಮೆ ನಡೆಯುವ ಚೀನಾದ ಕಮ್ಯುನಿಸ್ಟ್ ಪಕ್ಷದ ಮಹಾಧಿವೇಶನ ಹತ್ತಿರವಾಗುತ್ತಿರುವಂತೆ ಚೀನಾ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಮತ್ತೊಮ್ಮೆ ಸಮರ ಸಾರಿದೆ. ಭ್ರಷ್ಟಾಚಾರ ವಿರೋಧಿ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವನ್ನು ತಡೆಗಟ್ಟಲು 120 ಜನರ ತಂಡವನ್ನು ರಚಿಸಲಾಗಿದೆ.

ಎರಡು ದಿನಗಳ ಸಮಾವೇಶದಲ್ಲಿ ಭಾಗವಹಿಸುತ್ತಿರುವ ಈ ತಂಡದ ಸದಸ್ಯರು ಕಳೆದ ಐದು ವರ್ಷಗಳ ವಿದ್ಯಮಾನಗಳನ್ನು ಸಂಗ್ರಹಿಸಿ ಮಹಾಧಿವೇಶನದಲ್ಲಿ ಪಕ್ಷದ ಉನ್ನತ ಸಮಿತಿಯ ಪರಾಮರ್ಶೆಗಾಗಿ ಸಲ್ಲಿಸುತ್ತಾರೆ. ಈಗಾಗಲೇ ಭ್ರಷ್ಟಾಚಾರ ವಿರೋಧಿ ಅಭಿಯಾನದಲ್ಲಿ ತಿಮಿಂಗಿಲಗಳ ವಿರುದ್ಧ ಕ್ರಮ ಜರುಗಿಸಿರುವ ಚೀನಾ ಸರ್ಕಾರ ಇನ್ನು ಮುಂದಿನ ದಿನಗಳಲ್ಲಿ ಸಣ್ಣ ಪ್ರಮಾಣದ ಭ್ರಷ್ಟಾಚಾರದ ವಿರುದ್ಧವೂ ಸಮರ ಸಾರಲು ಸಿದ್ಧತೆ ನಡೆಸಿದೆ.

2012ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಉನ್ನತ ಮಟ್ಟದ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ ಚೀನಾ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಭದ್ರತಾ ಪಡೆಯ ಮುಖ್ಯಸ್ಥ ಯಾಂಗ್ ಕಾಂಗನನ್ನು ಪಕ್ಷದಿಂದ ಉಚ್ಚಾಟಿಸಿದ್ದೇ ಅಲ್ಲದೆ ಏಳುವರ್ಷಗಳ ಸಜೆಯನ್ನೂ ವಿಧಿಸುವಲ್ಲಿ ಯಶಸ್ವಿಯಾಗಿದ್ದರು. ಚೀನಾ ಸರ್ಕಾರದ ಭ್ರಷ್ಟಾಚಾರ ವಿರೋಧಿ ಅಭಿಯಾನದ ಫಲವಾಗಿ 250ಕ್ಕೂ ಹೆಚ್ಚು ಉನ್ನತ ಅಧಿಕಾರಿಗಳು ಶಿಕ್ಷೆಗೊಳಗಾಗಿದ್ದು ಇವರಲ್ಲಿ ಸೇನಾಧಿಕಾರಿಗಳು, ಕಾರ್ಪೊರೇಟ್ ಉದ್ಯಮಿಗಳೂ ಸೇರಿದ್ದಾರೆ.

14 ಲಕ್ಷ ಪಕ್ಷದ ಸದಸ್ಯರಿಗೆ ಶಿಸ್ತಿನ ಪಾಠ ಕಲಿಸಲಾಗಿದೆ. ಚೀನಾ ಅಧ್ಯಕ್ಷರ ಭ್ರಷ್ಟಾಚಾರ ವಿರೋಧಿ ಅಂದೋಲನ ಜನಪ್ರಿಯವಾಗಿದ್ದರೂ ಇದರಿಂದ ದೇಶದ ಆರ್ಥಿಕ ಅಭಿವೃದ್ಧಿ ಕುಂಠಿತವಾಗಿದೆ. ಸರ್ಕಾರದ ಕೆಂಗಣ್ಣಿಗೆ ಗುರಿಯಾಗುವುದರಿಂದ ತಪ್ಪಿಸಿಕೊಳ್ಳಲು ಉನ್ನತಮಟ್ಟದ ಅಧಿಕಾರಿಗಳು ಅನೇಕ ಯೋಜನೆಗಳಿಗೆ ಅನುಮತಿಯನ್ನೇ ನೀಡದಿರುವುದರಿಂದ ಅಭಿವೃದ್ಧಿ ಕುಂಠಿತವಾಗಿದೆ. ಪಕ್ಷದ 19ನೆಯ ಮಹಾಧಿವೇಶನದಲ್ಲಿ ಭ್ರಷ್ಟಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಇನ್ನೂ ಕಠಿಣವಾದ ಯೋಜನೆಯನ್ನು ಅನಾವರಣಗೊಳಿಸುವುದಾಗಿ ಕಮ್ಯುನಿಸ್ಟ್ ಪಕ್ಷದ ವಕ್ತಾರರು ತಿಳಿಸಿದ್ದಾರೆ.