ಅಕ್ಕನಿಗಾಗಿ ಪ್ರೀತಿಯನ್ನು ತ್ಯಾಗ ಮಾಡಬೇಕಾ ?

ಪ್ರ : ನನಗೀಗ 28 ವರ್ಷ. ಒಬ್ಬಳು ಹುಡುಗಿಯನ್ನು ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದೇನೆ. ಮದುವೆ ಯಾಗಬೇಕೆನ್ನುವ ಆಸೆಯಲ್ಲಿ ಇದ್ದೇವೆ. ಆದರೆ ನಮ್ಮ ಆಸೆ ಕೈಗೂಡುವುದು ಕಷ್ಟ ಅನಿಸುತ್ತಿದೆ. ನನಗೊಬ್ಬಳು 30 ವರ್ಷದ ಅಕ್ಕ ಇದ್ದಾಳೆ. ಅವಳಿಗಿನ್ನೂ ಮದುವೆಯಾಗಿಲ್ಲ. ಅವಳ ಮದುವೆಯ ನಂತರವೇ ನಮ್ಮ ಮದುವೆ ಅಂತ ನಿರ್ಧರಿಸಿದ್ದೇವೆ. ಅಕ್ಕನಿಗೆ ಆರು ವರ್ಷದಿಂದ ವರನನ್ನು ಹುಡುಕುತ್ತಿದ್ದರೂ ಯಾವ ಗಂಡೂ ಅವಳನ್ನು ಒಪ್ಪಿರಲಿಲ್ಲ. ಅವಳು ಸ್ವಲ್ಪ ಕಪ್ಪು ಮತ್ತು ಕುಳ್ಳಗೆ ಇದ್ದು ದಪ್ಪಗಿದ್ದಾಳೆ.  ಈಗ ಒಂದು ಹುಡುಗ ಅವಳನ್ನು ಮದುವೆಯಾಗಲು ಮುಂದೆ ಬಂದಿದ್ದಾನೆ. ಆದರೆ ಅವನ ಒಂದೇ ಕಂಡೀಶನ್ ಅಂದರೆ ಅವನ ತಂಗಿಯನ್ನು ನಾನು ಮದುವೆ ಆಗಬೇಕೆನ್ನುವುದು. ನನಗೆ ಅಕ್ಕನ ಮೇಲೆ ಪ್ರೀತಿ ಇದೆ ನಿಜ. ಅವಳೂ ಎಲ್ಲರಂತೆ ಮದುವೆಯಾಗಿ ಸಂಸಾರ ನಡೆಸಬೇಕೆನ್ನುವುದೇ ನನ್ನ ಇಚ್ಛೆ. ಆದರೆ ಅದಕ್ಕಾಗಿ ನಾನು ನನ್ನ ಪ್ರೀತಿಯನ್ನು ತ್ಯಾಗ ಮಾಡಲಾ? ನನ್ನ ಹುಡುಗಿ ನನ್ನನ್ನೇ ನಂಬಿಕೊಂಡು ಕುಳಿತಿದ್ದಾಳೆ. ಅವಳ ಮನೆಯವರು ಬೇರೆ ಮದುವೆಗೆ ಒತ್ತಾಯಿಸಿದರೂ ಅವಳು ಯಾವ ನೆಂಟಸ್ತಿಕೆಯನ್ನೂ ಒಪ್ಪದೇ ನನಗಾಗಿ ಕಾದಿದ್ದಾಳೆ. ನಮ್ಮ ಕುಟುಂಬದವರೆಲ್ಲರೂ ಅಕ್ಕನಿಗಾಗಿ ಅಷ್ಟೂ ಮಾಡಲು ಸಾಧ್ಯವಿಲ್ಲವಾ ಅಂತ ನನ್ನನ್ನೇ ಪ್ರಶ್ನಿಸುತ್ತಿದ್ದಾರೆ. `ನಿನಗೆ ಅಕ್ಕನಿಗಿಂತ ನಿನ್ನ ಪ್ರೀತಿಯೇ ದೊಡ್ಡದಾಯಿತಾ?’ ಅನ್ನುತ್ತಿದ್ದಾರೆ. ನನಗೇನು ಮಾಡಬೇಕೆಂದೇ ತೋಚುತ್ತಿಲ್ಲ. ಬೇರೆ ಹುಡುಗಿಯ ಜೊತೆ ಸಂಸಾರ ನಡೆಸುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ನಾನು ಸಿಗದಿದ್ದರೆ ನನ್ನ ಹುಡುಗಿಯೂ ಜೀವಂತವಿರುವುದು ಕಷ್ಟ. ಇಂತಹ ಸ್ಥಿತಿಯಲ್ಲಿ ನಾನೇನು ಮಾಡಲಿ?

: ನಿಜವಾಗಿಯೂ ನೀವು ಸಂಕಷ್ಟದ ಪರಿಸ್ಥಿತಿಯಲ್ಲಿ ಇದ್ದೀರಿ. ಅಕ್ಕನಿಗೆ ಮದುವೆ ಮಾಡಿಯೇ ತಮ್ಮನಾದ ನೀವು ಮದುವೆಯಾಗುವುದು ಲೋಕಾರೂಢಿ. ನೀವು ಅದಕ್ಕೆ ಬೆಲೆಕೊಟ್ಟೇ ಇಷ್ಟು ವರ್ಷ ಅಕ್ಕನ ಮದುವೆಗಾಗಿ ಕಾದಿರಿ ಮತ್ತು ಅದಕ್ಕಾಗಿ ಪ್ರಯತ್ನಿಸುತ್ತಲೇ ಇದ್ದೀರಿ. ಆದರೆ ಅವಳಿಗೆ ಇನ್ನೂ ಮದುವೆಯ ಯೋಗ ಕೂಡಿಬಂದಿಲ್ಲ. ಈಗ ಬಂದ ವರನೂ ಈ ರೀತಿಯ ಕಂಡೀಶನ್ ಹಾಕಿದ್ದು ನಿಮ್ಮ ದುರಾದೃಷ್ಟ. ನಿಮ್ಮ ಜೀವನದಲ್ಲಿ ಯಾರೂ ಇಲ್ಲದೇ ಹೋಗಿದ್ದರೆ ನೀವು ಅವರ ಕಂಡೀಶನ್ನಿನಂತೆ ಆ ಹುಡುಗನ ತಂಗಿಯನ್ನು ಮದುವೆಯಾಗಬಹುದಿತ್ತು. ಆದರೆ ಈಗ ನೀವು ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ನೀವು ಪ್ರೀತಿಸುತ್ತಿದ್ದ ಹುಡುಗಿಯ ಭವಿಷ್ಯವನ್ನೂ ಯೋಚಿಸಬೇಕಾಗುತ್ತದೆ. ನಿಮ್ಮ ಅಕ್ಕನಿಗಾಗಿ ನಿಮ್ಮ ಪ್ರೀತಿಯನ್ನು ನೀವು ತ್ಯಾಗ ಮಾಡಬಹುದು. ಆದರೆ ಇದರಲ್ಲಿ ನಿಮ್ಮ ಜೀವನದ ಪ್ರಶ್ನೆ ಮಾತ್ರ ಇರುವುದಲ್ಲ. ನೀವು ಪ್ರೀತಿಸಿದ ಹುಡುಗಿಯ ಭವಿಷ್ಯವೂ ಅಡಗಿದೆ. ಅವಳ ಜೀವನವನ್ನು ಹಾಳುಮಾಡುವ ಅಧಿಕಾರ ನಿಮಗಿಲ್ಲ. ಒಂದು ಹೆಣ್ಣಿನ ಮದುವೆಗೋಸ್ಕರ ಇನ್ನೊಬ್ಬಳನ್ನು ಸಂಕಷ್ಟಕ್ಕೆ ಸಿಲುಕಿಸುವುದು ಯಾವ ನ್ಯಾಯ? ನೀವೀಗ ಅಕ್ಕನಿಗೆ ಬಂದ ವರನ ಹತ್ತಿರ ನಿಮ್ಮ ಪರಿಸ್ಥಿತಿಯನ್ನು ವಿವರಿಸಿ. ನೀವೀಗ ಅವರ ತಂಗಿಯನ್ನು ಮದುವೆಯಾದರೆ ಸಂಪೂರ್ಣ ಪ್ರೀತಿ ಕೊಡಲು ಕಷ್ಟ ಅನ್ನುವ ಸತ್ಯ ಅವರಿಗೆ ಹೇಳಿ. ಆ ಹುಡುಗಿಗೆ ಬೇರೆ ಗಂಡನ್ನು ನೋಡುವ ಜವಾಬ್ದಾರಿ ಹೊರಲು ತಯಾರಿರುವುದಾಗಿ ತಿಳಿಸಿ. ಅವನು ಅರ್ಥಮಾಡಿಕೊಂಡು ನಿಮ್ಮ ಅಕ್ಕನನ್ನು ಮದುವೆಯಾಗಬಹುದು. ಇಲ್ಲದಿದ್ದರೆ ನೀವು ಅಕ್ಕನಿಗೆ ಬೇರೆ ಗಂಡನ್ನು ಹುಡುಕುವುದೇ ಒಳ್ಳೆಯದು. ಅಲ್ಲಿಯವರೆಗೆ ನಿಮ್ಮ ಮದುವೆಯನ್ನು ಮುಂದೂಡುವುದು ಅನಿವಾರ್ಯವಾಗಬಹುದು.

LEAVE A REPLY