`ರಾಷ್ಟ್ರೀಯ ಭದ್ರತಾ ಕಾಯಿದೆ ಮೂಲಕ ಗೋ ಹತ್ಯೆ ಮಾಡುವವರಲ್ಲಿ ಭಯ ಮೂಡಿಸುವುದು ನಮ್ಮ ಉದ್ದೇಶ’

ಉತ್ತರ ಪ್ರದೇಶ ಸರಕಾರವು ಗೋ ಹತ್ಯೆ ಹಾಗೂ ಅಕ್ರಮ ಗೋಸಾಗಾಟ ಪ್ರಕರಣಗಳಲ್ಲಿ ಶಾಮೀಲಾದವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆ ಹೇರಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಕೇಶವ್ ಪ್ರಸಾದ್ ಮೌರ್ಯ ಅವರನ್ನು ಮಾತನಾಡಿಸಿದಾಗ :

  • ನಿಮ್ಮ ಸರಕಾರ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದು ಹತ್ತಿರ ಹತ್ತಿರ 100 ದಿನಗಳಾಗುತ್ತಾ ಬಂದಿದೆ. ನಿಮ್ಮ ಮೂರು ಮುಖ್ಯ ಸಾಧನೆಗಳೇನು ?

ಕೇವಲ ಮೂರು ಸಾಧನೆಗಳೇಕೆ ? ಆರು ಪ್ರಮುಖ ಸಾಧನೆಗಳಾಗಬಾರದೇಕೆ ? ಬಹು ಮುಖ್ಯ ಸಾಧನೆಯೇನೆಂದರೆ 86 ಲಕ್ಷ ರೈತರ 36,000 ಕೋಟಿ ಸಾಲ ಮನ್ನಾ. ಗ್ರಾಮಗಳಲ್ಲಿ 18 ಗಂಟೆ, ತೆಹಸಿಲುಗಳಲ್ಲಿ 20 ಗಂಟೆ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ 24 ಗಂಟೆ ವಿದ್ಯುತ್ ಸರಬರಾಜು ಮಾಡಿರುವುದು ಕೂಡ ನಮ್ಮ ಸಾಧನೆ. ನಾವು ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸಿದ್ದೇವೆ. ನಮ್ಮ ಸರಕಾರ ಬಡವರ, ಯುವಜನತೆಯ ಹಾಗೂ ರೈತರ ಪರವಾದ ಸರಕಾರ, ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುವ ಸರಕಾರ. ಇಂದು ರಾಜ್ಯದಲ್ಲಿ ಅಪರಾಧಿಗಳು ಭಯಭೀತಗೊಂಡಿದ್ದಾರೆ. ಒಂದೋ ಅಪರಾಧ ನಡೆಸುವುದನ್ನು ನಿಲ್ಲಿಸಬೇಕು ಇಲ್ಲವೇ ರಾಜ್ಯವನ್ನೇ ಬಿಟ್ಟು ಹೋಗುವ ಪರಿಸ್ಥಿತಿ ಅವರ ಮುಂದಿದೆ.

  • ಆದರೂ ರಾಜ್ಯದಲ್ಲಿ ಹಲವಾರು ಪ್ರಮುಖ ಅಪರಾಧ ಪ್ರಕರಣಗಳು ವರದಿಯಾಗಿವೆಯಲ್ಲ ?

ಅಪರಾಧ ಪ್ರಕರಣಗಳು ಶೇ 100ರಷ್ಟು ಅಂತ್ಯವಾಗಿದೆ ಎಂದು ನಾನು ಹೇಳುವುದಿಲ್ಲ. ಆದರೆ ಇಂದು ಅಪರಾಧಿಗಳು ರಾಜಕೀಯ ಬೆಂಬಲ ಅಥವಾ ಆಡಳಿತ ಪಕ್ಷದ ಬೆಂಬಲ ಪಡೆಯುತ್ತಿಲ್ಲ. ಸಾಮಾನ್ಯ ನಾಗರಿಕರಾಗಿ ನೀವು ಜನರ ನಡುವೆ ಓಡಾಡಿ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಅವರು ಸುರಕ್ಷತೆಯ ಯಾ ಅಸುರಕ್ಷತೆಯ ಭಾವನೆ ಹೊಂದಿದ್ದಾರೆಯೇ ಎಂದು ಕೇಳಿ ತಿಳಿದುಕೊಳ್ಳಿ. ಅವರ ಉತ್ತರ ಎಲ್ಲವನ್ನೂ ವಿವರಿಸುವುದು.

  • ಹಾಗಾದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕಾನೂನು ಸುವ್ಯವಸ್ಥೆ ಸುಧಾರಿಸಿದೆಯೇ ?

ಖಂಡಿತವಾಗಿಯೂ.

  • ಗೋಹತ್ಯೆಯನ್ನು ನಿಯಂತ್ರಿಸುವ ಬಗ್ಗೆ ನಿಮ್ಮ ಸರಕಾರ ಬಹಳಷ್ಟು ಮಾತನಾಡುತ್ತಿದೆಯಲ್ಲ ?

ಈ ವಿಚಾರದಲ್ಲಿ ಸರಕಾರ ಹೆಚ್ಚು ಕಠಿಣ ನಿಲುವು ತಳೆಯುವ ಅಗತ್ಯವಿಲ್ಲ. ಈಗಾಗಲೇ ಕಠಿಣ ಕಾನೂನೊಂದು ರಾಜ್ಯದಲ್ಲಿ ಅಸ್ತಿತ್ವದಲ್ಲಿದೆ. ನಮ್ಮ ಸರಕಾರ ಅದನ್ನು ಕೇವಲ ಜಾರಿ ಮಾಡಿದೆಯಷ್ಟೆ.

  • ಹಾಗಿರುವಾಗ ರಾಷ್ಟ್ರೀಯ ಭದ್ರತಾ ಕಾಯಿದೆಯನ್ನು ಗೋಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ಏಕೆ ದಾಖಲಿಸುವ ನಿರ್ಧಾರ ಕೈಗೊಂಡಿದ್ದೀರಿ ?

ಗೋಹತ್ಯೆ ಯಾ ಗೋ ಅಕ್ರಮ ಸಾಗಾಟ ಮಾಡಿದವರ ವಿರುದ್ಧ ಇಂತಹ ಕಾಯಿದೆಯನ್ವಯ ಪ್ರಕರಣ ದಾಖಲಿಸಿದ್ದೇ ಆದಲ್ಲಿ ಅದು ಇತರರ ಮನಸ್ಸಿನಲ್ಲಿ ಭಯವನ್ನು ಸೃಷ್ಟಿಸುತ್ತದೆ. ಈ ರಂಗದಲ್ಲಿ ಕೆಲಸ ಮಾಡುವವರ ಮನದಲ್ಲಿ ಭಯ ಮೂಡಿಸುವುದೇ ಈ ನಿರ್ಧಾರದ ಹಿಂದಿನ ಉದ್ದೇಶ.

  • ಈ ಕಾಯಿದೆಯ ದುರುಪಯೋಗದ ಸಾಧ್ಯತೆಯಿಲ್ಲವೇ ?

ಖಂಡಿತವಾಗಿಯೂ ಇಲ್ಲ. ಯಾರಾದರೂ ಗೋಹತ್ಯೆ ಮಾಡಿದರೆ ಹಾಗೂ ಈ ಕೃತ್ಯಕ್ಕೆ ಸಾಕ್ಷ್ಯಗಳು ದೊರೆತರೆ ಮಾತ್ರ ಈ ಕಾಯಿದೆ ಹೇರಲಾಗುವುದು. ಯಾರನ್ನಾದರೂ ಬಂಧಿಸಿದ ಕೂಡಲೇ ಈ ಕಾಯಿದೆ ಅವರ ವಿರುದ್ಧ ಹೇರಲಾಗುವುದಿಲ್ಲ. ಉತ್ತರ ಪ್ರದೇಶದಲ್ಲಿ ಯಾರು ಕೂಡ ದನದ ಕುತ್ತಿಗೆಯ ಹತ್ತಿರ ಕತ್ತಿಯನ್ನು ಕೊಂಡು ಹೋಗುವ ಧೈರ್ಯ ತೋರುವುದಿಲ್ಲವೆಂಬ ವಿಶ್ವಾಸ ನನಗಿದೆ.

  • ರಾಜ್ಯ ಬಜೆಟ್ ನಂತರ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಈ ಪ್ರಕ್ರಿಯೆಯನ್ನು ಇನ್ನೂ ಆರಂಭಿಸದೇ ಇರುವುದಕ್ಕೆ ವಿಪಕ್ಷಗಳು ಸರಕಾರವನ್ನು ಟೀಕಿಸುತ್ತಿವೆಯಲ್ಲ ?

ಹೀಗೆ ಟೀಕಿಸುವವರು ರೈತರ ಹಿತೈಷಿಗಳಲ್ಲ. ಅವರು ಕೇವಲ ಹಿತೈಷಿಗಳಂತೆ ನಟಿಸುತ್ತಾರೆ ಹಾಗೂ ಮಂಡ್ಸೌರ್ ಅಥವಾ ಸಹರಾನಪುರಕ್ಕೆ ಯಾವಾಗಲಾದರೊಮ್ಮೆ ಭೇಟಿ ನೀಡುತ್ತಾರೆ.

  • ರೈತರ ಸಾಲ ಮನ್ನಾ ಪ್ರಕ್ರಿಯೆಯೇಕೆ ವಿಳಂಬಗೊಂಡಿದೆ ?

ವಿಳಂಬವೇನಿಲ್ಲ. ಅಖಿಲೇಶ್ ಯಾದವ್ ಸರಕಾರ ನಮಗೆ ಈ ನಿಟ್ಟಿನಲ್ಲಿ ಯಾವುದೇ ಆರ್ಥಿಕ ಸಂಪನ್ಮೂಲ ಉಳಿಸಿಲ್ಲ. ಬಜೆಟ್ ಮೂಲಕ ಹಣ ಹೊಂದಿಸಬೇಕಿದೆ.

  • ಹಿಂದೂ ಯುವ ವಾಹಿನಿ ಕ್ಷಿಪ್ರವಾಗಿ ಬೆಳೆಯುತ್ತಿದೆ ಹಾಗೂ ಯೋಗಿ ಮುಖ್ಯಮಂತ್ರಿ ಆದ ನಂತರ ಅದರ ಸದಸ್ಯರು ಹೆಚ್ಚು ಧೈರ್ಯ ಹೊಂದಿದ್ದಾರೆಂದು ಕೆಲ ಬಿಜೆಪಿ ನಾಯಕರುಗಳೇ ಹೇಳುತ್ತಿದ್ದಾರೆ. ನೀವೇನಂತೀರಿ ?

ಹಾಗೇನಿಲ್ಲ. ಯುವ ವಾಹಿನಿ ಬಿಜೆಪಿ ಸಂಘಟನೆಯಲ್ಲ. ಅಂತಹ ನೂರಾರು ಸಂಘಟನೆಗಳು ರಾಜ್ಯ ಹಾಗೂ ರಾಷ್ಟ್ರದಲ್ಲಿವೆ. ಬಿಜೆಪಿಗೆ ಬೂತ್ ಮಟ್ಟದಲ್ಲಿ ತನ್ನದೇ ಸಂಘಟನೆಯಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಎಲ್ಲಾ 80 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸುವುದೆಂಬ ಆತ್ಮವಿಶ್ವಾಸ ನನಗಿದೆ.