ಕೇರಳ ಮದರಸಾಗಳಿಂದ ಭಯೋತ್ಪಾದನೆ ಬೋಧನೆ

ದಿನವೊಂದಕ್ಕೆ ಕೋಟಿಗಟ್ಟಲೆ ಹಣ ಅರಬ್ ರಾಷ್ಟ್ರಗಳಿಂದ ಹವಾಲ

ಜಾಲ ಮೂಲಕ ಪಡೆಯುತ್ತಿವೆ ಈ ಧಾರ್ಮಿಕ ಶಿಕ್ಷಣ ಸಂಸ್ಥೆಗಳು

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕೇರಳದ ಹಲವಾರು ಮದರಸಾಗಳಲ್ಲಿ ವಿದ್ಯಾರ್ಥಿಗಳಿಗೆ ಜಾಗತಿಕ ಭಯೋತ್ಪಾದನೆಯೊಂದಿಗೆ ನಂಟು ಹಿಂದಿರುವ ವಹಾಬಿ ತತ್ವಗಳನ್ನು ಬೋಧಿಸಲಾಗುತ್ತಿದೆ ಎಂಬ ಸ್ಫೋಟಕ ಮಾಹಿತಿ ಇಂಡಿಯಾ ಟುಡೆ ನಡೆಸಿದ ತನಿಖಾ ವರದಿಯೊಂದರಿಂದ ತಿಳಿದು ಬಂದಿದೆ.

ಜಗತ್ತಿನಾದ್ಯಂತ ಯುದ್ಧದ ಮೂಲಕ ಜಾಗತಿಕ ಕಲೀಫೇಟ್ ಸ್ಥಾಪಿಸುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಗುರಿಯನ್ನು ಆಧಾರವಾಗಿರಿಸಿ ಯುವ ಮನಸ್ಸುಗಳನ್ನು ಕೆಡಿಸುತ್ತಿರುವ ಈ ಮದರಸಾಗಳು  ಶ್ರೀಮಂತ ಗಲ್ಫ್  ದೇಶಗಳ ಹವಾಲ ಹಣದ ಸಹಾಯದಿಂದ ಕಾರ್ಯಾಚರಿಸುತ್ತಿವೆ ಎಂಬುದು ಈಗ ಬಹಿರಂಗಗೊಂಡಿದೆ.

“ಸುತ್ತಮುತ್ತ ಬಹಳಷ್ಟು ಹಿಂದೂ ಜನರು ಇದ್ದಾರೆ. ನಾವೇನಾದರೂ ಕಲೀಫೇಟ್ ಬಗ್ಗೆ ಮಾತನಾಡಿದರೆ ಅವರು ನಮ್ಮನ್ನು ಐಎಸ್ ಮಂದಿ ಎಂದು ಕರೆಯಬಹುದು. ಇದೇ ಕಾರಣದಿಂದ ನಾವು ನೇರವಾಗಿ ಕಾರ್ಯನಿರ್ವಹಿಸುವುದಿಲ್ಲ, ಮಕ್ಕಳ ಮನಸ್ಸಿನಲ್ಲಿ ಕೊಂಚ ಕೊಂಚವಾಗಿ ಅದನ್ನು ಬೇರೂರಿಸುತ್ತಿದ್ದೇವೆ” ಎಂದು   ಕೊಝಿಕೋಡ್ ಜಿಲ್ಲೆಯ ಪುಲ್ಲೊರಮ್ಮಲ್ ಎಂಬಲ್ಲಿನ ಕರುಣಾ ಚ್ಯಾರಿಟೇಬಲ್ ಟ್ರಸ್ಟ್ ನಡೆಸುವ ಮದರಸಾದ ಜಂಟಿ ಕಾರ್ಯದರ್ಶಿ ಮೊಹಮ್ಮದ್ ಬಶೀರ್  ಹೇಳುತ್ತಾರೆ.

“ಎಲ್ಲದ್ದಕ್ಕೂ ಕಲೀಫೇಟ್ ಆಧಾರ, ಅದು ನಮ್ಮ ಹೃದಯದಲ್ಲಿದೆ. ಅದನ್ನು ಮಕ್ಕಳೊಂದಿಗೆ ಹಂಚಿಕೊಳ್ಳುತ್ತೇವೆ. ಇಲ್ಲಿ ಅವಸರವಿಲ್ಲ. ಕಲೀಫೇಟ್ ಅನ್ನು ಒಂದು ದಿನದಲ್ಲಿ ನಿರ್ಮಿಸಲು ಸಾಧ್ಯವಿಲ್ಲ” ಎಂದು ಅವರು ವಿವರಿಸುತ್ತಾರೆ.

ಮಕ್ಕಳ ಮನಸ್ಸಿನಲ್ಲಿ ತೀವ್ರವಾದಿ ವಿಚಾರಧಾರೆಯನ್ನು ತುಂಬಿಸುವ ಕೆಲಸ ಕೇವಲ ಒಂದು ಮದರಸಾಗೆ ಸೀಮಿತವಾಗಿಲ್ಲ,  ರಾಜ್ಯದ ಹಲವಾರು ಮದರಸಾಗಳು ಇದೀಗ ವಿವಾದಿತ ಇಸ್ಲಾಮಿಕ್ ಮತ ಪ್ರಚಾರಕ ಝಾಕಿರ್ ನಾಯ್ಕ್  ಅವರಂತಹ ಹೆಚ್ಚು ಹೆಚ್ಚು ಮಂದಿಯನ್ನು  ತಯಾರಿಸಲು ಶ್ರಮಿಸುತ್ತಿವೆ ಎನ್ನುತ್ತದೆ ಇಂಡಿಯಾ ಟುಡೆ ತನಿಖಾ ವರದಿ.

ಕರಂತೂರು ಎಂಬಲ್ಲಿ ಮದರಸಾವೊಂದನ್ನು ನಡೆಸುವ ಅಬ್ದುಲ್ ಮಲಿಕ್ ತಮ್ಮ  ಕೇಂದ್ರದಲ್ಲಿ ಮಕ್ಕಳಿಗೆ ಝಕೀರ್ ನಾಯ್ಕ್ ವೀಡಿಯೋಗಳನ್ನು ನಿಯಮಿತವಾಗಿ ತೋರಿಸಲಾಗುತ್ತಿದೆ ಎಂಬುದನ್ನು ಒಪ್ಪುತ್ತಾರೆ. “ಝಕೀರ್ ನಾಯ್ಕ್ ಯಾರೆಂದು ಎಲ್ಲರಿಗೂ ಗೊತ್ತಿದೆ. ಅವರು ಮಹಿಳೆಯರಿಗೆ ಹಾಗೂ ಇತರ ಧಾರ್ಮಿಕ ಗುಂಪುಗಳಿಗೆ ಇಸ್ಲಾಂಗೆ ಆಹ್ವಾನ ನೀಡುವ  ಹಾಗೂ ಜನರು ಇಸ್ಲಾಂ ಧರ್ಮವನ್ನು ಸ್ವೀಕರಿಸುವ ವೀಡಿಯೋ ತೋರಿಸುತ್ತೇವೆ” ಎಂದು ಅವರು ವಿವರಿಸುತ್ತಾರೆ.

ಹೆಚ್ಚಿನ ಇಂತಹ ಮದರಸಾಗಳು ಗಲ್ಫ್ ರಾಷ್ಟ್ರಗಳ ಅನಾಮಿಕ ದಾನಿಗಳಿಂದ ಹಣ  ಪಡೆಯುತ್ತವೆ. ಭೂಗತ ಹವಾಲ ಜಾಲಗಳ ಮುಖಾಂತರ ತಮ್ಮ ಸಂಸ್ಥೆ ಅರಬ್ ದೇಶಗಳಿಂದ ಆರ್ಥಿಕ ಬೆಂಬಲ ಪಡೆಯು ತ್ತಿರುವುದನ್ನು ಬಶೀರ್ ಹಾಗೂ ಮಲಿಕ್ ಒಪ್ಪುತ್ತಾರೆ.

“ನಮ್ಮ ಹಲವಾರು ಸೋದರರು ವಿವಿಧ ರಾಷ್ಟ್ರಗಳಲ್ಲಿದ್ದಾರೆ. ಕಾಳಧನವನ್ನು ನಾವು ಹುಂಡಿ ಎನ್ನುತ್ತೇವೆ. ಅಲ್ಲಿ ಹಣ ನೀಡಿದರೆ ಇಲ್ಲಿ ಕೆಲ ಏಜನ್ಸಿಗಳು ನೇರವಾಗಿ ಹಣ ನೀಡುತ್ತವೆ. ಕಟ್ಟಡ ನಿರ್ಮಾಣ ಮತ್ತಿತರ ಕೆಲಸಗಳಿಗೆ ಈ ಹಣ ಉಪಯೋಗಿಸುತ್ತೇವೆ. ಕೇರಳದ ವಿವಿಧ ಮದರಸಾಗಳಿಗೆ ಈ ರೀತಿಯಾಗಿ ಪ್ರತಿದಿನ ಕೋಟಿಗಟ್ಟಲೆ ಹಣ ಸಂದಾಯವಾಗುತ್ತವೆ” ಎಂಬ ಅಂಶವನ್ನೂ ಮಲಿಕ್ ಬಹಿರಂಗ ಪಡಿಸುತ್ತಾರೆ.ಕೊಯಿಲಾಂಡಿಯ ಮರ್ಖಝುಲ್ ಜಾಮಿಯಾ ಮದರಸಾದ ಆಡಳಿತಾಧಿಕಾರಿ ಅಬ್ದುಲ್ ಗಫರ್ ಕೂಡ ಇದೇ ಮಾತನ್ನು ಹೇಳುತ್ತಾರೆ.

 

 

LEAVE A REPLY