ಕುಡಿಯುವ ನೀರಿಗೆ ಪರದಾಟ

 ನಮ್ಮ ಪ್ರತಿನಿಧಿ ವರದಿ

ವಿಟ್ಲ : 25ಕ್ಕೂ ಹೆಚ್ಚು ಮನೆಗಳನ್ನು ಹೊಂದಿರುವ ವಿಟ್ಲ ಪಡ್ನೂರು ಗ್ರಾಮದ 6ನೇ ವಾರ್ಡಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೇ ಜನ ಸಂಕಟ ಅನುಭವಿಸುತ್ತಿದ್ದಾರೆ.

ಕಡಂಬು, ಅನಿಲಕಟ್ಟೆ ಸುತ್ತಮುತ್ತಲ ಪ್ರದೇಶದಲ್ಲಿನ ತೀರಾ ಬಡಕುಟುಂಬಗಳಿಗೆ ಈವರೆಗೂ ಕುಡಿಯುವ ನೀರಿನ ಸೌಕರ್ಯವನ್ನು ಸ್ಥಳೀಯ ಪಂ ಕಲ್ಪಿಸಿಲ್ಲವಾಗಿದೆ. ಒಂದೆರಡು ಮನೆಗಳಿಗೆ ಮಾತ್ರ ಸ್ವಂತ ಬಾವಿಯಿದ್ದು ಉಳಿದ ಕುಟುಂಬಗಳು ಇದೇ ಬಾವಿಯ ನೀರನ್ನೇ ಅವಲಂಬಿಸಿದ್ದಾರೆ. ವಿಟ್ಲ ಕಸಬಾ ಗ್ರಾಮ ಮತ್ತು ವಿಟ್ಲ ಪಡ್ನೂರು ಗ್ರಾಮಗಳ ಗಡಿಯಲ್ಲಿರುವ ಬಡ ಕುಟುಂಬಗಳು ತಮ್ಮ ವ್ಯಾಪ್ತಿಯ ವಿಟ್ಲ ಪಡ್ನೂರು ಗ್ರಾ ಪಂ.ಗೆ ಅದೆಷ್ಟೋ ವರ್ಷಗಳಿಂದ ಮನವಿ ನೀಡುತ್ತಿವೆ. ಆದರೆ ಈವರೆಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡುವಲ್ಲಿ ಜನ ಪ್ರತಿನಿಧಿಗಳು ಮುತುವರ್ಜಿ ತೆಗೆದುಕೊಂಡಿಲ್ಲ. ಪಂ ಸದಸ್ಯ ಭಾಸ್ಕರ ಶೆಟ್ಟಿಗಾರ್ ಗ್ರಾಮ ಪಂ.ನಿಂದ ಜಿಲ್ಲಾ ಪಂಚಾಯತು ತನಕ ಮನವಿ ನೀಡುತ್ತಿದ್ದರೂ ಅದ್ಯಾಕೋ ಈವರೆಗೂ ಸ್ಪಂದಿಸಿಲ್ಲವೆಂದು ಶೆಟ್ಟಿಗಾರ್ ಆರೋಪಿಸಿದ್ದಾರೆ. ಇನ್ನಾದರೂ ಈ ಭಾಗದ ಬಡ ಕುಟುಂಬಗಳನ್ನು ಕಡೆಗಣಿಸದೆ ಕುಡಿಯುವ ನೀರಿನ ಸೌಕರ್ಯ ಒದಗಿಸಬೇಕೆಂದು ಇಲ್ಲಿನ ಬಡಪಾಯಿಗಳು ಒತ್ತಾಯಿಸುತ್ತಿದ್ದಾರೆ.

 

LEAVE A REPLY