ಭಾರತೀಯ ಕ್ರಿಕೆಟ್ ರಂಗದ ಸೂಪರ್ ಮ್ಯಾನ್ ವಿರಾಟ್

ಇಂದು ಐಸಿಸಿ ಚಾಂಪಿಯನ್ಸ್ ಟ್ರೋಫಿ 2017 ಫೈನಲ್

  • ಎಸ್ ಜಗದೀಶ್ಚಂದ್ರ ಅಂಚನ್ ಸೂಟರಪೇಟೆ

`ಕ್ರೀಡೆ’ ಯಾವುದಾದರೂ ಸರಿ. ಆಟಗಾರರಲ್ಲಿ ಬದ್ಧತೆ ಹಾಗೂ ಆತ್ಮವಿಶ್ವಾಸವಿದ್ದರೆ ಏನನ್ನೂ ಸಾಧಿಸಬಹುದು ಎನ್ನುವುದಕ್ಕೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇಲ್ಲಿ ಹೆಚ್ಚು ಪ್ರಸ್ತುತವೆನಿಸುತ್ತಾರೆ. ವರ್ತಮಾನ ಕಾಲದಲ್ಲಿ `ಕ್ರಿಕೆಟ್ ಲೆಜೆಂಡ್’ಗಳ ದಾಖಲೆಯನ್ನು ಒಂದೊಂದಾಗಿಯೇ ಮುರಿಯುತ್ತಿರುವ ವಿರಾಟ್ ಕೊಹ್ಲಿ ಈಗ ಮತ್ತೊಂದು ದಾಖಲೆಯ ಒಡೆಯರಾಗಿದ್ದಾರೆ. ತನ್ನ ಕ್ರಿಕೆಟ್ ಬಾಳ್ವೆಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿರುವ ಇವರು ಇದೀಗ ಏಕದಿನ ಕ್ರಿಕೆಟಿನಲ್ಲಿ ಅತಿವೇಗವಾಗಿ ಎಂಟು ಸಾವಿರ ರನ್ ಪೂರೈಸಿದ ಶ್ರೇಯಕ್ಕೆ ಪಾತ್ರರಾದರು.

ಲಂಡನಿನಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಭರವಸೆಯ ಆಟವನ್ನು ಆಡಿ ಭಾರತೀಯ ತಂಡಕ್ಕೆ ಸ್ವಯಂ ಸ್ಫೂರ್ತಿಯಾಗಿರುವ ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಭವದ ನಿರಂತರತೆಯನ್ನು ಕಾಯ್ದುಕೊಂಡಿದ್ದಾರೆ. ಕ್ರಿಕೆಟಿನ ಮೂರು ಪ್ರಕಾರದ ಕ್ರಿಕೆಟ್ ಪಂದ್ಯಗಳಲ್ಲೂ ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಬೀಸುವ ಇವರು `ಕ್ರಿಕೆಟ್ ಲೆಜೆಂಡ್’ ಆಗುವ ಹಾದಿಯನ್ನು ಮುನ್ನಡೆಯನ್ನು ಕಾಣುತ್ತಿದ್ದಾರೆ. ಬಮಿಂಗ್ ಹ್ಯಾಮಿನಲ್ಲಿ ಗುರುವಾರ ನಡೆದ ಬಾಂಗ್ಲಾ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಕೊಹ್ಲಿ ಎಂಟು ಸಾವಿರ ರನ್ನುಗಳ ಗಡಿ ದಾಟಿ ನೂತನ ದಾಖಲೆ ನಿರ್ಮಿಸಿದರು.

ದಕ್ಷಿಣ ಆಫ್ರಿಕಾ ತಂಡದ ನಾಯಕ ಹಾಗೂ ತನ್ನ ಆಪ್ತ ಗೆಳೆಯ ಎಬಿಡಿ ವಿಲಯರ್ಸ್ ಹೆಸರಿನಲ್ಲಿದ್ದ ಈ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿದಿದ್ದಾರೆ. ವಿಲಿಯರ್ಸ್ 182 ಏಕದಿನ ಇನ್ನಿಂಗ್ಸುಗಳಲ್ಲಿ ಈ ದಾಖಲೆಗೈದಿದ್ದರು. ಆದರೆ ವಿರಾಟ್ ಕೊಹ್ಲಿ ಈ ದಾಖಲೆಯನ್ನು 183 ಏಕದಿನ ಪಂದ್ಯಗಳ 175ನೇ ಇನ್ನಿಂಗ್ಸಿನಲ್ಲಿ ದಾಖಲಿಸಿದ್ದಾರೆ. ಭಾರತದ ಮಾಜಿ ನಾಯಕರುಗಳಾದ ಸೌರವ್ ಗಂಗೂಲಿ 200ನೇ ಇನ್ನಿಂಗ್ಸಿನಲ್ಲಿ ಹಾಗೂ ಸಚಿನ್ ತೆಂಡೂಲ್ಕರ್ 210 ಇನ್ನಿಂಗ್ಸುಗಳಲ್ಲಿ ಎಂಟು ಸಾವಿರ ರನ್ನುಗಳ ಗಡಿ ದಾಟಿದ್ದರು. ಇದೀಗ ವಿರಾಟ್ ಕೊಹ್ಲಿ ಇವರೆಲ್ಲರನ್ನು ಹಿಂದಿಕ್ಕಿ ತನ್ನ ಸರ್ವಾಂಗೀಣ ದಾಖಲೆಯನ್ನು ದಾಖಲಿಸಿ ವಿಶ್ವಶ್ರೇಷ್ಠರೆನ್ನಿಸಕೊಂಡಿದ್ದಾರೆ.

ಶ್ರೇಷ್ಠತೆಯ ಆಟವನ್ನೇ ತನ್ನ ಕ್ರಿಕೆಟ್ ಬಾಳ್ವೆಯಲ್ಲಿ ಪ್ರದರ್ಶಿಸುತ್ತಾ ವಿಶ್ವದ ಕ್ರಿಕೆಟ್ ಅಭಿಮಾನಿಗಳ ಕಣ್ಮಣಿಯಾಗಿರುವ ವಿರಾಟ್ ಕೊಹ್ಲಿ ಪ್ರಸ್ತುತ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲೂ ಭಾರತೀಯ ತಂಡದ ಗೆಲುವಿನ ರೂವಾರಿ ಅವರ ಆಟಕ್ಕೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಕೊಹ್ಲಿ ಸ್ವದೇಶ ಪಂದ್ಯಗಳಲ್ಲಿ ಮಾತ್ರ ಹೆಚ್ಚು ಘರ್ಜಿಸುತ್ತಾರೆ. ವಿದೇಶಿ ನೆಲದಲ್ಲಿ ಅಷ್ಟು ಪ್ರಭಾವಶಾಲಿ ಬ್ಯಾಟ್ಸಮನ್ ಅಲ್ಲ ಎಂಬ ಮಾತು ಇತ್ತೀಚಿನ ವರ್ಷಗಳಲ್ಲಿ ಕೇಳಿಬಂದಿದೆ. ಈ ಪ್ರತಿಕ್ರಿಯೆಗಳಿಗೆಲ್ಲ ವಿರಾಟ್ ಕೊಹ್ಲಿ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯ ಪಂದ್ಯಗಳಲ್ಲಿ ಉತ್ತರಿಸಿದ್ದಾರೆ. ಹೆಚ್ಚಾಗಿ ಆಫ್ ಸ್ಟಂಪಿನಿಂದ ಆಚೆ ಹೋಗುವ ವೇಗದ ಎಸೆತಗಳಲ್ಲಿ ಎದುರಿಸಲು ಇವರು ಎಡವುತ್ತಿದ್ದರು. ಆದರೆ, ಬಾಂಗ್ಲಾದೇಶದ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಮನಮೋಹಕವಾಗಿ ಬ್ಯಾಟ್ ಬೀಸಿದರು. ಅವರ ಪ್ರತಿಯೊಂದು ಶಾಟುಗಳು ಕ್ರಿಕೆಟ್ ಪುಸ್ತಕದಲ್ಲಿ ದಾಖಲಿಸುವಂತÀದ್ದು. ಅದ್ಭುತ ಕವರ್ ಡ್ರೈವ್, ಸ್ಟ್ರೇಟ್ ಡ್ರೈವ್, ಮನಸೂರೆಗೊಳ್ಳುವಂತಿತ್ತು. ಅದ್ಭುತ ಪುಟ್ವರ್ಕ್ ಕೂಡಾ ಬಾಂಗ್ಲಾ ಪಂದ್ಯದ ಅವರ ಇನ್ನಿಂಗ್ಸಿನಲ್ಲಿ ಕಂಡುಬಂದಿದೆ.

ಈಗಾಗಲೇ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಮೂರು ಅರ್ಧ ಶತಕವನ್ನು ದಾಖಲಿಸಿಕೊಂಡಿದ್ದಾರೆ. ಇವರು ಅರ್ಧಶತಕ ಬಾರಿಸಿದ ಮೂರು ಪಂದ್ಯಗಳಲ್ಲಿ ಭಾರತ ವಿಜಯಶಾಲಿಯಾಗಿದೆ. ಪಾಕಿಸ್ತಾನ ವಿರುದ್ಧ 81 ರನ್, ದಕ್ಷಿಣ ಆಫ್ರಿಕಾ ವಿರುದ್ಧ 76 ರನ್ ಹಾಗೂ ಬಾಂಗ್ಲಾದೇಶ ವಿರುದ್ಧ 96 ರನ್ ಗಳಿಸಿ 253.00 ರನ್ ಸರಾಸರಿಯನ್ನು ಹೊಂದಿದ್ದಾರೆ. ಇದಕ್ಕೆ ಕಾರಣ ಅವರು ಈ ಮೂರು ಇನ್ನಿಂಗ್ಸುಗಳಲ್ಲಿ ಅಜೇಯ ಬ್ಯಾಟಿಂಗ್ ನಡೆಸಿದ್ದು, ಇಂಗ್ಲೆಂಡಿನ ವೇಗದ ಬೌನ್ಸಿ ಪಿಚ್ಚಿನಲ್ಲಿ ಕೊಹ್ಲಿ ಆಟ ಬೊಂಬಾಟ್ ಆಗಿ ಮೂಡಿ ಬಂದಿರುವುದು ಕ್ರಿಕೆಟ್ ಪ್ರೇಮಿಗಳಿಗೆ ಸಂತಸ ತಂದಿದೆ.

ಅತ್ಯಂತ ಎಳೆ ವಯಸ್ಸಿನಲ್ಲೇ ಭಾರತೀಯ ಕ್ರಿಕೆಟ್ ರಂಗದಲ್ಲಿ ಅದ್ಭುತ ಸಾಧಕನಾಗಿ ಕಾಣಿಸಿಕೊಂಡಿರುವ ವಿರಾಟ್ ಕೊಹ್ಲಿ ಬ್ಯಾಟಿಂಗ್ ನಡೆಸುತ್ತಿದ್ದಾಗಲೆಲ್ಲ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಅತ್ಯಂತ ಚುರುಕಿನ ಆಟಕ್ಕೆ ಬದ್ಧತೆಯ ಮೆರಗು ನೀಡುವ ಇವರ ಆಟದಲ್ಲಿ ತಾಳ್ಮೆ ಹಾಗೂ ಅಬ್ಬರದ ಸಮ್ಮಿಳಿತ ಕೂಡಿರುತ್ತದೆ. ಯಾವುದೇ ಬೌಲರುಗಳನ್ನು ಯಾವುದೇ ನೆಲದಲ್ಲೂ ಚೆಂಡಾಡುವ ಕಲೆ ವಿರಾಟ್ ಕೊಹ್ಲಿಗೆ ಕರಗತವಾಗಿದೆ. ತಂಡದ ಗೆಲುವಿನಲ್ಲಿ ವಿಶ್ವಾಸನೀಯ ಆಟವನ್ನು ಆಡುವ ಇವರು ಪ್ರತಿಷ್ಠಿತ ಕ್ರಿಕೆಟ್ ಟೂರ್ನಿಗಳಲ್ಲಿ ಭಾರತೀಯ ತಂಡಕ್ಕೆ ಆಸರೆಯಾಗುತ್ತಾರೆ.

ಈಗಾಗಲೇ ಹಲವಾರು ದಾಖಲೆಗಳನ್ನು ಮುರಿದು ಹೊಸ ದಾಖಲೆಗಳತ್ತ ಹೆಜ್ಜೆಯನ್ನಿಟ್ಟಿರುವ ವಿರಾಟ್ ಕೊಹ್ಲಿಯವರ ಈ ಸ್ಥಿರ ಪ್ರದರ್ಶನಕ್ಕೆ ಅವರಲ್ಲಿರುವ ಆತ್ಮವಿಶ್ವಾಸವೇ ಮುಖ್ಯಕಾರಣವಾಗಿದೆ. ಈಗಾಗಲೇ ಆಡಿರುವ 183 ಏಕದಿನ ಪಂದ್ಯಗಳ 175 ಇನ್ನಿಂಗ್ಸುಗಳಿಂದ ಇವರು 54.48ರ ಸರಾಸರಿಯಲ್ಲಿ 8008 ರನ್ನುಗಳನ್ನು ಬಾರಿಸಿದ್ದಾರೆ. ಇದರಲ್ಲಿ 27 ಶತಕ ಹಾಗೂ 42 ಅರ್ಧಶತಕಗಳನ್ನು ಇವರು ದಾಖಲಿಸಿಕೊಂಡಿರುವರು. ಹೀಗೆ ಸಾಧನೆಗಳ ಪರ್ವವನ್ನೇ ಕಾಣುತ್ತಿರುವ ವಿರಾಟ್ ಕೊಹ್ಲಿ ಮೊನ್ನೆಯಷ್ಟೇ ಏಕದಿನ ಕ್ರಿಕೆಟ್ ವಿಶ್ವ ರ್ಯಾಂಕಿಂಗಿನಲ್ಲಿ ನಂಬರ್ ಒನ್ ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ಹಾಗಾಗಿ ಅವರು ಭಾರತೀಯ ಕ್ರಿಕೆಟ್ ರಂಗದ ಸೂಪರ್ ಮ್ಯಾನ್ ಎಂದರೂ ತಪ್ಪಾಗಲಾರದು.