ಇದು ಮಹಿಳೆಯರ ಸೀಟು, ಏಳು…

ಹಾಸ್ಯ ಭರಿತ ಟ್ರೋಲ್, ವೈರಲ್ ಆಯ್ತು ಬಸ್ ವಿಡಿಯೋ

 ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕೆಲವು ದಿನಗಳ ಹಿಂದೆ ಸರಕಾರಿ ಬಸ್ಸಿನಲ್ಲಿ ನಡೆದ ಮಹಿಳಾ ಸೀಟಿನ ವಿವಾದ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಾಸ್ಯದ ವಸ್ತುವಾಗಿದ್ದು, ಮಹಿಳೆಯನ್ನು ವ್ಯಂಗ್ಯ ಮಾಡಲಾಗುತ್ತಿದೆ. ಲೇಡಿಸ್ ಸೀಟಿನಲ್ಲಿ ಕುಳಿತಿದ್ದ ಯುವಕನೊಬ್ಬನ ಕತ್ತಿನ ಪಟ್ಟಿ ಹಿಡಿದ ಮಹಿಳೆಯೊಬ್ಬರು ಆತನನ್ನು ಅಲ್ಲಿಂದ ಎಬ್ಬಿಸಿ ತಾನು ಜಬರದಸ್ತ್ ಆಗಿ ಅದರಲ್ಲಿ ಕುಳಿತುಕೊಂಡಿದ್ದರು. ಈ ಮಹಿಳೆಯನ್ನು ಇದೀಗ ವಾಟ್ಸಪ್, ಫೇಸ್ಬುಕ್ಕುಗಳಲ್ಲಿ ಕಾಮಿಡಿಯಾಗಿ ಚಿತ್ರಿಸಿ ಹರಿಬಿಡಲಾಗಿದೆ.

ಬಜಪೆ ಮೂಲದ ಮಹಿಳೆಯ ಹಾಸ್ಯ ಭರಿತ ಟ್ರೋಲುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಬಸ್ಸಿನಲ್ಲಿ ಯುವಕ ಹಾಗೂ ಮಹಿಳೆಯ ನಡುವೆ ತೀವ್ರ ಮಾತಿನ ಜಟಾಪಟಿ ನಡೆದು, ಕತ್ತಿನ ಪಟ್ಟಿ ಹಿಡಿಯುವ ಮಟ್ಟಕ್ಕೂ ತಲುಪಿತ್ತು. ಕೊನೆಗೆ ಈ ಮಹಿಳೆ ತನ್ನ ಹಠ ಸಾಧಿಸಿ ಯುವಕನನ್ನು ಎಬ್ಬಿಸಿದ್ದರು.

ಏಳು ಏಳು ಎಂದು ಹಾಡುವ ರೀಮಿಕ್ಸ್ ಡಿಜೆ ಸಾಂಗ್ ತಯಾರಾಗಿದ್ದು ವಾಟ್ಸಪ್ಪಿನಲ್ಲಿ ಹರಿದಾಡುತ್ತಿದೆ. ಇನ್ನೊಂದು ಟ್ರೋಲಿನಲ್ಲಿ ಪುಟ್ಟ ಮಗುವೊಂದು ತನ್ನ ತಾಯಿಯ ಮಡಿಲಲ್ಲಿ  ಹಾಯಾಗಿ ಕುಳಿತುಕೊಳ್ಳಲು ಸೀಟು ಸಿಕ್ಕಿತು ಎನ್ನುವಷ್ಟರಲ್ಲಿ, ಈ ಹೆಂಗಸು ಅಲ್ಲಿಗೆ ಬಂದು ಏಳು ಏಳು ಎಂದು ಜಗಳಕ್ಕೆ ನಿಲ್ಲುವ ಸನ್ನಿವೇಶ ಸೃಷ್ಟಿಸಲಾಗಿದೆ.

ಇನ್ನೊಂದರಲ್ಲಿ ನಾಯಿಯೊಂದು ಖುರ್ಚಿಯಲ್ಲಿ ಕುಳಿತುಕೊಂಡಿದ್ದಾಗ ಈ ಮಹಿಳೆಯ ಚಿತ್ರ ಬಳಸಿ `ಏಳು ನೀನು, ನನ್ನ ಸೀಟಿದು’ ಎಂದು ಸಂಭಾಷಣೆ ಹೆಣೆಯಲಾಗಿದೆ.

ಈ ಹೆಂಗಸು ಇಲ್ಲಿಯೂ ಬಂದ್ಳಾ ? ಎಂದು ನಾಯಿ ಹೇಳಿ ಹೊರಟು ಹೋಗುವ ತುಳು ಭಾಷೆಯ ಟ್ರೋಲ್ ಕೂಡಾ ಸೃಷ್ಟಿಸಲಾಗಿದೆ. ಇದಲ್ಲದೇ ಖಾಸಗಿ ಹಾಗೂ ಸರಕಾರಿ ಸಾರಿಗೆ ಬಸ್ಸಿನಲ್ಲಿ `ಆ ಪೆÇಂಜೋವು ಬರುವು ಮಾರಾಯೆರೇ…’ ಜಾಗೃತೆ ಎಂದೂ ಹೇಳಲಾಗಿದೆ.

ಬತ್ತಿ ಕೂಡ್ಲೇ ಸೀಟ್ ಬುಡ್ದ್ ಕೊರ್ಲೆ ಎನ್ನುವ ಟ್ರೋಲ್ ಹರಿದಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ಮೋದಿ ಕೂಡಾ ಟ್ರೋಲಿನಲ್ಲಿ ಕಾಣಿಸಿಕೊಂಡಿದ್ದಾರೆ.