ಮತ್ತೆ ಹಿಂಸೆ, ಕಲ್ಲಡ್ಕ ಪ್ರಕ್ಷುಬ್ದ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಇತ್ತೀಚೆಗಷ್ಟೆ ಚೂರಿ ಇರಿತ, ಬಂದ್, ನಿಷೇಧಾಜ್ಞೆÉಯಿಂದ ನಲುಗಿ ಹೋಗಿದ್ದ ತಾಲೂಕಿನ ಕೋಮು ಸೂಕ್ಷ್ಮ ಪ್ರದೇಶ ಕಲ್ಲಡ್ಕದಲ್ಲಿ ಇದೀಗ ಮತ್ತೆ ನಿಷೇಧಾಜ್ಞೆ ನಡುವೆಯೂ ಮಂಗಳವಾರ ಚೂರಿ ಇರಿತ, ಹಲ್ಲೆ, ಕಲ್ಲು, ಬಾಟ್ಲಿ ಎಸೆತ, ಘರ್ಷಣೆ, ಬಂದ್‍ನಿಂದ ಪ್ರಕ್ಷುಬ್ದ ವಾತಾವರಣ ನಿರ್ಮಾಣಗೊಂಡಿದೆ.

ಮಂಗಳವಾರ ಸಂಜೆ ಕಲ್ಲಡ್ಕ ನಿವಾಸಿ ಅಬೂಸಾಲಿ ಎಂಬವರ ಪುತ್ರ ಖಲೀಲ್ ಎಂಬವರು ಕಲ್ಲಡ್ಕ ಮೀನು ಮಾರುಕಟ್ಟೆ ಸಮೀಪದ ಅಂಗಡಿಯಿಂದ ಇಫ್ತಾರಿಗಾಗಿ ಹಣ್ಣು-ಹಂಪಲು ಖರೀದಿಸಿ ಬರುತ್ತಿದ್ದ ವೇಳೆ ಕಾರಿನಲ್ಲಿ ಬಂದ ಸ್ಥಳೀಯ ನಿವಾಸಿ ಹಿಂಜಾವೇ ಮುಖಂಡ ಕರುಣಾಕರ ಶೆಟ್ಟಿ ಹಾಗೂ ರವಿ ಭಂಡಾರಿ ಎಂಬವರನ್ನೊಳಗೊಂಡ ತಂಡವೊಂದು ಏಕಾಏಕಿ ಮಾತಿಗೆಳೆದು ಖಲೀಲ್ ಮೇಲೆ ತಲವಾರು ಹಲ್ಲೆ ನಡೆಸುವ ಮೂಲಕ ಇಡೀ ಕಲ್ಲಡ್ಕ ಮತ್ತೆ ಪ್ರಕ್ಷುಬ್ದತೆಗೆ ಮರಳಲು ಕಾರಣವಾಗಿದೆ ಎನ್ನಲಾಗಿದೆ. ಬಳಿಕ ಎರಡೂ ಕೋಮಿನ ಯುವಕರ ಮಧ್ಯೆ ಚಕಮಕಿ-ಘರ್ಷಣೆ ಭುಗಿಲೆದ್ದು, ಪರಸ್ಪರ ಕಲ್ಲು-ಬಾಟ್ಲಿ ತೂರಾಟ ನಡೆದು ಕ್ಷಣ ಮಾತ್ರದಲ್ಲಿ ಕಲ್ಲಡ್ಕ ರಣರಂಗವಾಗಿ ಮಾರ್ಪಟ್ಟಿದೆ.

ಕಲ್ಲಡ್ಕ ಪೇಟೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀರಾಮ ಮಂದಿರದ ಮೇಲಿಂದ ಕಿಡಿಗೇಡಿಗಳು ಏಕಾಏಕಿ ಕಲ್ಲು ಹಾಗೂ ಸೋಡಾ ಬಾಟ್ಲಿ ಎಸೆತ ನಡೆಸಿದ್ದಾರೆ. ಈ ಸಂದರ್ಭ ಸಮೀಪದ ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಮೇಲೆಯೂ ಕಲ್ಲೆಸೆತ ನಡೆದಿದ್ದು,  ಮಸೀದಿಯ ಕಿಟಕಿ ಗಾಜುಗಳು ಹಾನಿಗೀಡಾಗಿದೆ. ಇದಕ್ಕೆ ಪ್ರತಿಯಾಗಿ ಇನ್ನೊಂದು ವರ್ಗ ರಸ್ತೆಯ ಇನ್ನೊಂದು ಭಾಗದಲ್ಲಿ ನಿಂತು ಅತ್ತ ಕಡೆಯೂ ಕಲ್ಲೆಸೆಯ ನಡೆಸಿದೆ. ಈ ಸಂದರ್ಭ ಕೆಲವು ನಿಮಿಷಗಳ ಕಾಲ ನೇರ ಕಲ್ಲು ತೂರಾಟ ನಡೆದು ರಣರಂಗದಂತಹ ಸನ್ನಿವೇಶ ನಿರ್ಮಾಣವಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ಪತ್ರಿಕೆಗೆ ತಿಳಿಸಿದ್ದಾರೆ.

ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಅಸಹಾಯಕರಾಗಿ ಮೂಕಪ್ರೇಕ್ಷರಾಗಿ ಮೌನಕ್ಕೆ ಶರಣಾಗಿದ್ದರು. ಬಳಿಕ ಹೆಚ್ಚುವರಿ ಪೊಲೀಸರೊಂದಿಗೆ ಸ್ಥಳಕ್ಕಾಗಮಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಲಾಠಿಚಾರ್ಜ್ ಆದೇಶ ನೀಡುವ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತಂದುಕೊಂಡಿದ್ದಾರೆ.  ಘಟನೆಯಿಂದ ಕಲ್ಲಡ್ಕ ನಿವಾಸಿ ಖಲೀಲ್, ಗೋಳ್ತಮಜಲು ನಿವಾಸಿ ಸಿರಾಜ್,  ಕರುಣಾಕರ ಶೆಟ್ಟಿ ಸಹಿತ ಹಲವರು ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘರ್ಷಣೆ ಸಂದರ್ಭ ಸ್ಥಳದಲ್ಲಿದ್ದ ಬಂಟ್ವಾಳ ನಗರ ಠಾಣಾಧಿಕಾರಿ ರಕ್ಷಿತ್ ಎ ಕೆ ಅವರು ಗುಂಪು ಚದುರಿಸಲು ಶ್ರೀರಾಮ ಭಜನಾ ಮಂದಿರ ಸಮೀಪ ಧಾವಿಸುತ್ತಿದ್ದಂತೆ ಅವರ ಮೇಲೂ ಕಲ್ಲು ತೂರಾಟ ನಡೆದಿದ್ದು, ತಲೆಗೆ ಗಾಯಗಳಾಗಿವೆ. ಬಳಿಕ ಬ್ಯಾಂಡೇಜ್ ಸುತ್ತಿಕೊಂಡು ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ದುಷ್ಕರ್ಮಿಗಳ ರೌದ್ರ ನರ್ತನಕ್ಕೆ ಹಲವು ವಾಹನಗಳು, ಅಂಗಡಿಗಳು ಜಖಂಗೊಂಡಿದ್ದು, ಅಪಾರ ಪ್ರಮಾಣದ ನಷ್ಟ ಅಂದಾಜಿಸಲಾಗಿದೆ. ಘಟನೆಯ ಬಳಿಕ ಕಲ್ಲಡ್ಕ ಪೇಟೆಯ ಅಂಗಡಿ-ಮುಂಗಟ್ಟುಗಳು ಕ್ಷಣ ಮಾತ್ರದಲ್ಲಿ ಸಂಪೂರ್ಣವಾಗಿ ಬಂದ್ ಆಗಿವೆ. ಜಿಲ್ಲಾ ಎಸ್ಪಿ ಭೂಷಣ್ ಜಿ ಬೊರಸೆ ಕಲ್ಲಡ್ಕಕ್ಕೆ ಆಗಮಿಸಿದ್ದು, ಮೊಕ್ಕಾಂ ಹೂಡಿದ್ದಾರೆ. ಕಲ್ಲಡ್ಕ ಸಹಿತ ಬಂಟ್ವಾಳ ತಾಲೂಕಿನ ಆಯಕಟ್ಟಿನ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ ಬಿಗು ಬಂದೋಬಸ್ತ್ ಕೈಗೊಳ್ಳಲಾಗಿದೆ. ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡಂತಿದೆ.

ಕಲ್ಲಡ್ಕ ಘಟನೆಯ ವೇಳೆ ನಡೆಸಲಾಗಿರುವ ಕೆಲವೊಂದು ವೀಡಿಯೋ ದೃಶ್ಯಾವಳಿಗಳ ತುಣುಕುಗಳು ಬಳಿಕ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ.

ಭಟ್‍ಗೆ ಸವಾಲು ಹಾಕಿದ್ದ ಖಲೀಲ್

ಕಳೆದ ಮೇ 26 ರಂದು ಕಲ್ಲಡ್ಕದಲ್ಲಿ ಶುಕ್ರವಾರದ ನಮಾಝ್ ಮುಗಿಸಿ ಬರುತ್ತಿದ್ದ ಹಾಶಿರ್ ಹಾಗೂ ಮಹ್‍ಶೂಕ್ ಎಂಬಿಬ್ಬರು ಮುಸ್ಲಿಂ ಯುವಕರ ಮೇಲೆ ಗ್ಯಾಂಗ್ ತಲವಾರು ಹಲ್ಲೆ ನಡೆಸಿ ಪರಾರಿಯಾಗಿತ್ತು. ಆ ಬಳಿಕ ಮರುದಿನ ನಡೆದ ಮುಸ್ಲಿಂ ಯುವಕರು ಕರೆ ನೀಡಿದ್ದ ಬಂದ್ ವೇಳೆ ತಂಡದೊಂದಿಗೆ ಪೇಟೆಗಿಳಿದು ಅಂಗಡಿ ತೆರೆಯುವಂತೆ ಒತ್ತಾಯಪಡಿಸುತ್ತಿದ್ದ ಸಂಘ ಪರಿವಾರದ ಪ್ರಮುಖ ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ಇದೇ ಖಲೀಲ್ ಮಧ್ಯೆ ನೇರ ವಾಗ್ವಾದ, ಚಕಮಕಿ ಹಾಗೂ ಸವಾಲು ನಡೆದಿತ್ತು ಎನ್ನಲಾಗಿದೆ. ಇದರ ಮುಂದುವರಿದ ಭಾಗವಾಗಿಯೇ ಇದೀಗ ಮಂಗಳವಾರದ ಘಟನೆ ನಡೆದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಬಂಧನ ಪರ್ವ

ಕಲ್ಲಡ್ಕದಲ್ಲಿ ಮಂಗಳವಾರ ಸಂಜೆ ನಡೆದ ಘರ್ಷಣೆಯ ಬಳಿಕ ರಾತ್ರಿ ವೇಳೆಗೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆಯುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆರೋಪಿಗಳ ಬಂಧನದ ಭರದಲ್ಲಿ ಪೊಲೀಸರು ಬಹುತೇಕ ಅಮಾಯಕರನ್ನೇ ತಂದು ಠಾಣೆಯಲ್ಲಿ ಕೂರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಘಟನೆಯ ಬಳಿಕ ರಾತ್ರಿ ವೇಳೆ ಸಂಚಾರ ಆರಂಭಿಸಿರುವ ಪೊಲೀಸರು ಘಟನೆಯ ಪರಿವೆಯೇ ಇಲ್ಲದೆ ರಸ್ತೆಯಲ್ಲಿ ಸಂಚರಿಸುವ ಅಮಾಯಕರ ವಾಹನಗಳಿಗೆ ಇಲಾಖಾ ಜೀಪ್ ಅಡ್ಡ ಇಟ್ಟು ಬಂಧಿಸುವ ಕಾರ್ಯಕ್ಕೂ ಕೈ ಹಾಕುತ್ತಿದ್ದಾರೆ ಎನ್ನುವ ಸ್ಥಳೀಯರು ನೈಜ ಆರೋಪಿಗಳ ಬಂಧನ ಪೊಲೀಸರ ಉದ್ದೇಶವಾಗಿರದೆ ಕೇವಲ ಲೆಕ್ಕ ಭರ್ತಿ ಉದ್ದೇಶ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.