ಇಬ್ಬರು ಅಂಧರಿಗೆ ದೃಷ್ಟಿಯಾದ ಜಯಂತಿ ಬಾಳಿಗಾ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ತನ್ನ ನಿವಾಸದ ಎದುರು ರಸ್ತೆಯಲ್ಲಿ ಕಳೆದ ಮಾ 21ರಂದು ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಮಾಹಿತಿ ಹಕ್ಕು ಕಾರ್ಯಕರ್ತ, ಮಂಗಳೂರು ಡೊಂಗರಕೇರಿಯ ನಿವಾಸಿ ವಿನಾಯಕ ಬಾಳಿಗಾರ ತಾಯಿ ವಿಧಿವಶರಾಗಿದ್ದ ಜಯಂತಿ ಬಾಳಿಗಾರ ಕಣ್ಣುಗಳನ್ನು ಇದೀಗ ದಾನ ಮಾಡಲಾಗಿದೆ. ಜ 8ರಂದು ಜಯಂತಿ ಬಾಳಿಗಾ (81) ವಿಧಿವಶರಾಗಿದ್ದರು. ಈ ಸಂದರ್ಭದಲ್ಲಿ ಮನೆ ಮಂದಿ ಅವರ ಕಣ್ಣುಗಳನ್ನು ದಾನ ಮಾಡಲು ಇಚ್ಛಿಸಿದ್ದರು.

ಜಯಂತಿ ಬಾಳಿಗಾರ ಪುತ್ರ ವಿನಾಯಕ ಬಾಳಿಗಾರನ್ನು ಬೆಳ್ಳಂಬೆಳಗ್ಗೆ ಅವರ ನಿವಾಸದ ಮುಂದೆ ದುಷ್ಕರ್ಮಿಗಳ ತಂಡವೊಂದು ಹತ್ಯೆ ಮಾಡಿ ಪರಾರಿಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಮೋ ಬ್ರಿಗೇಡ್ ಸಂಘಟನೆ ಮುಖ್ಯಸ್ಥ ನರೇಶ್ ಶೆಣೈ ಸೇರಿದಂತೆ ಕೆಲವರನ್ನು ಬಂಧಿಸಿದ್ದರು. ಬಳಿಕ ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡು ಹೊರಬಂದಿದ್ದರು.

ತನ್ನ ಪುತ್ರ ವಿನಾಯಕ ಬಾಳಿಗಾ ಸಾವಿಗೆ ಕಾರಣರಾದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ನಡೆದ ಪ್ರತಿಭಟನೆಗಳಲ್ಲಿ ಜಯಂತಿ ಅವರು ಪಾಲ್ಗೊಂಡು ನ್ಯಾಯಕ್ಕಾಗಿ ಆಗ್ರಹಿಸಿದ್ದರು. ಏಕೈಕ ಪುತ್ರನ ಹತ್ಯೆಯ ಆಘಾತದಿಂದ ನೊಂದಿದ್ದರು. ಬಳಿಕ ಮೆದುಳಿನ ಜ್ವರಕ್ಕೆ ತುತ್ತಾಗಿದ್ದ ಅವರು ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಇವರ ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿದ ಹಿನ್ನೆಲೆಯಲ್ಲಿ ದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಇಬ್ಬರಿಗೆ ಕಣ್ಣುಗಳನ್ನು ದಾನ ಮಾಡಲಾಗಿದೆ.

ಈ ಮೂಲಕ ಇಬ್ಬರು ಅಂಧರು ಈ ಜಗತ್ತಿನ ಬೆಳಕು ನೋಡುವಂತಾಗಿದ್ದಾರೆ. ಜೊತೆಗೆ ಇದೇ ಕಣ್ಣುಗಳ ಮೂಲಕ ಮುಂದೊಂದು ದಿನ ಬಾಳಿಗಾ ಹತ್ಯೆ ಮಾಡಿದ ಆರೋಪಿಗಳಿಗೆ ಶಿಕ್ಷೆಯಾಗಿ ಅವರು ಜೈಲು ಸೇರುವುದನ್ನು ಇದೇ ಕಣ್ಣುಗಳು ಕಾಣಲಿವೆ. ಜಯಂತಿ ನೇತ್ರದಾನದ ಮೂಲಕ ಇಬ್ಬರ ಬಾಳಿಗೆ ಬೆಳಕಾಗುವ ಜೊತೆಗೆ ಅಗೋಚರವಾಗಿ ತಮ್ಮ ಪುತ್ರನ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗುವುದನ್ನೂ ಕಣ್ಣಾರೆ ಕಾಣಲಿದ್ದಾರೆ.