ವಿನಾಯಕ ಬಾಳಿಗಾ ತಾಯಿ ವಿಧಿವಶ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ದುಷ್ಕರ್ಮಿಗಳಿಂದ ತನ್ನ ನಿವಾಸದ ಮುಂಭಾಗದಲ್ಲೇ ಹತ್ಯೆಗೀಡಾಗಿದ್ದ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗಾರ ತಾಯಿ ವಿಧಿವಶರಾಗಿದ್ದಾರೆ.

ಪುತ್ರನ ಸಾವಿನ ಬಳಿಕ ಬಹಳಷ್ಟು ಆಘಾತಕ್ಕೆ ಒಳಗಾಗಿದ್ದ ವಿನಾಯಕ ಬಾಳಿಗಾರ ತಾಯಿ ಜಯಂತಿ ಬಾಳಿಗಾ (81) ಅಸೌಖ್ಯಗೊಂಡಿದ್ದರು. ಎರಡು ದಿನದ ಹಿಂದೆ ತಮ್ಮ ನಿವಾಸದಲ್ಲಿ ಕುಸಿದು ಬಿದ್ದಿದ್ದು, ಈ ಸಂದರ್ಭ ಅವರ ತಲೆಗೆ ತೀವ್ರ ಏಟು ಬಿದ್ದಿದ್ದು, ಕೂಡಲೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೆದುಳಿನ ಜ್ವರಕ್ಕೂ ತುತ್ತಾಗಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ.

ಕಳೆದ ವರ್ಷ ಮಾರ್ಚ್ 21ರಂದು ಮಂಗಳೂರಿನ ಆರ್ ಟಿ ಐ ಕಾರ್ಯಕರ್ತರಾಗಿದ್ದ ವಿನಾಯಕ ಬಾಳಿಗಾರನ್ನು ದುಷ್ಕರ್ಮಿಗಳು ಅವರ ನಿವಾಸದ ಮುಂಭಾಗದಲ್ಲಿ ಮುಂಜಾನೆ ದೇವಸ್ಥಾನಕ್ಕೆ ತೆರಳುವ ವೇಳೆ ಹತ್ಯೆ ಮಾಡಿ ಪರಾರಿಯಾಗಿದ್ದರು.

ಪುತ್ರನ ಸಾವಿಗೆ ನ್ಯಾಯ ಕೊಡಿಸಲೆಂದು ನಡೆದ ಪ್ರತಿಭಟನೆ, ಸುದ್ದಿಗೋಷ್ಠಿಗಳಲ್ಲಿ ಪತಿ ರಾಮಚಂದ್ರ ಬಾಳಿಗಾರ ಜೊತೆಗೆ ಜಯಂತಿ ಅವರು ಕೂಡಾ ಕಾಣಿಸಿಕೊಂಡಿದ್ದರು. ಇವರು ಪತಿ ರಾಮಚಂದ್ರ ಬಾಳಿಗಾ, ಪುತ್ರಿಯರಾದ ಶ್ವೇತಾ, ಆಶಾ, ಹರ್ಷಾರನ್ನು ಅಗಲಿದ್ದಾರೆ. ಬೋಳಾರ ರುದ್ರಭೂಮಿಯಲ್ಲಿ ಇಂದು ಅಂತ್ಯಸಂಸ್ಕಾರ ನಡೆಯಲಿದೆ.