ಹಳೆಯಂಗಡಿ ಗ್ರಾಮಸಭೆಯಲ್ಲಿ ಮೆಸ್ಕಾಂ ವಿರುದ್ಧ ಆಕ್ರೋಶ

ಹಳೆಯಂಗಡಿ ಪಂಚಾಯತಿ ಗ್ರಾಮಸಭೆ ಶುಕ್ರವಾರ ನಡೆಯಿತು

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಹಳೆಯಂಗಡಿ ಪಂಚಾಯತಿ ವ್ಯಾಪ್ತಿಯ ಗ್ರಾಮಸಭೆಯಲ್ಲಿ ಮೆಸ್ಕಾಂ ಸಮಸ್ಯೆ, ಸಸಿಹಿತ್ಲು ಬೀಚ್ ಅಬಿವೃದ್ಧಿ ಬಗ್ಗೆ ತೀವ್ರ ಚರ್ಚೆ ನಡೆಯಿತು.

ಪಂಚಾಯತಿ ಸಭೆಯಲ್ಲಿ ಮೆಸ್ಕಾಂಗೆ ಸಂಬಂಧಿಸಿದ ಮಾಹಿತಿ ನೀಡಿದ ಇಲಾಖೆಯ ಅಧಿಕಾರಿ ಶ್ರೀನಿವಾಸ್ ಮೂರ್ತಿ ಮಾತನಾಡಿ, “ ನೂರು ರೂ ಮೇಲ್ಪಟ್ಟ ವಿದ್ಯುತ್ ಬಿಲ್ಲುಗಳನ್ನು ನಿಗದಿತ ದಿನಾಂಕದ ಒಳಗಾಗಿ ಪಾವತಿಸಬೇಕು. ಇಲ್ಲದಿದ್ದಲ್ಲಿ ಮರುದಿನವೇ ವಿದ್ಯುತ್ ಫ್ಯೂಸ್ ತೆಗೆಯಲಾಗುವುದು. ಈ ಬಗ್ಗೆ ಮೇಲಧಿಕಾರಿಗಳು ಕಟ್ಟುನಿಟ್ಟಿನ ಆದೇಶ ಮಾಡಿದ್ದಾರೆ” ಎಂದು ಹೇಳಿದಾಗ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು, “ಸಣ್ಣ ಪ್ರಮಾಣದ ಬಿಲ್ ಬಾಕಿ ಇದ್ದಲ್ಲಿ ಬಡವರ ಮನೆಯ ವಿದ್ಯುತ್ ಫ್ಯೂಸ್ ತೆಗೆಯುವ ಮೆಸ್ಕಾಂ, ಪಂಚಾಯತಿಗಳು ದಾರಿದೀಪ, ನೀರಿಗೆ ಸಂಬಂಧಿಸಿದ ವಿದ್ಯುತ್ ಬಿಲ್ಲುಗಳ ಪಾವತಿಗೆ ಮೆಸ್ಕಾಂ ಕ್ರಮ ಕೈಗೊಳ್ಳುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಬಡವರು ಬಿಲ್ ಪಾವತಿಯ ಅಂತಿಮ ದಿನದಂದು ಬಿಲ್ ಪಾವತಿಗಾಗಿ ಲೈನಿನಲ್ಲಿ ನಿಂತಿದ್ದರೂ ಫ್ಯೂಸ್ ತೆಗೆಯಲಾಗುತ್ತಿದೆ. ಅಲ್ಲದೆ, ಬಿಲ್ ಕಟ್ಟಿದ ಬಳಿಕ ತೆಗೆದ ಫ್ಯೂಸ್ ಅಳವಡಿಸದೇ ಮೆಸ್ಕಾಂ ಇಲಾಖೆಯವರು ಸತಾಯಿಸುವ ಬಗ್ಗೆ ಈಗಾಗಲೇ ಹಲವು ದೂರುಗಳು ಬಂದಿವೆ. ಇದರಲ್ಲಿ ಪಂಚಾಯತ್ ಸದಸ್ಯರೊಬ್ಬರಿಗೂ ಇದೇ ರೀತಿ ಮಾಡಿದ್ದಾರೆ. ಪಂಚಾಯತ್ ಸದಸ್ಯರಿಗೇ ಈ ಸ್ಥಿತಿಯಾದರೆ ಸಾಮಾನ್ಯನ ಸ್ಥಿತಿ ಹೇಗಿರಬೇಕು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕ” ಎಂದು ಸದಸ್ಯ ಅಬ್ದುಲ್ ಖಾದರ್ ಆಗ್ರಹಿಸಿದರು.

ಹಳೆಯಂಗಡಿ ಪಂಚಾಯತ್ ವ್ಯಾಪ್ತಿಯ ಸಸಿಹಿತ್ಲು ಭಾಗದ ಅನುದಾನವನ್ನು ಬೀಚ್ ಅಭಿವೃದ್ಧಿ ಪಡಿಸಲು ಬಳಸಬಾರದು. ಅದನ್ನು ಸಸಿಹಿತ್ಲು ಗ್ರಾಮದ ಅಭಿವೃದ್ಧಿಗೆ ಬಳಸಬೇಕೆಂದು ಗ್ರಾಮಸ್ಥರು ಶುಕ್ರವಾರ ಹಳೆಯಂಗಡಿ ಬಿಲ್ಲವ ಸಂಘದಲ್ಲಿ ನಡೆದ ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮ ಸಭೆಯಲ್ಲಿ ಆಗ್ರಹಿಸಿದರು.

ಈ ಬಗ್ಗೆ ಮಾತನಾಡಿದ ಪಂಚಾಯತ್ ಸದಸ್ಯ ವಸಂತ್ ಬೆರ್ನಾರ್ಡ್, “ಸಸಿಹಿತ್ಲು ಪ್ರದೇಶದಿಂದ ಪಂಚಾಯತಿಗೆ ಬರುವ ವರಮಾನ ಕಡಿಮೆ. ಇದರಿಂದ ಬೀಚ್ ಸಹಿತ ಅಲ್ಲಿನ ಅಭಿವೃದ್ಧಿ ಅಸಾಧ್ಯ. ಆದ್ದರಿಂದ ಬೇರೆ ಅನುದಾನಗಳನ್ನು ಬಳಸಿಕೊಂಡು ಅಭಿವೃದ್ಧಿ ಪಡಿಸುವುದು ಅನಿವಾರ್ಯ” ಎಂದರು.