ಕಾಡುಪ್ರಾಣಿ, ಕೋತಿಗಳ ಕಾಟದಿಂದ ಕೃಷಿ ಹಾನಿ

ಗ್ರಾಮ ಸಭೆಯಲ್ಲಿ ರೈತರ ಆಕ್ರೋಶ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿ, ಕೋತಿಗಳ ಕಾಟದಿಂದ ತೆಂಗಿನ ತೋಟಕ್ಕೆ ತೀವ್ರ ಹಾನಿಯಾಗುತ್ತಿದ್ದು, ತೆಂಗಿನ ಎಳೆ ಕಾಯಿಗಳನ್ನು ನಾಶ ಮಾಡುತ್ತಿವೆ. ಇದರಿಂದಾಗಿ ಅಪಾರ ನಷ್ಟ ಉಂಟಾಗುತ್ತಿದೆ ಎಂದು ಸಂಗಬೆಟ್ಟು ಗ್ರಾಮ ಸಭೆಯಲ್ಲಿ ಸಂತ್ರಸ್ತ ಕೃಷಿಕರು ಆಕ್ರೋಶ ವ್ಯಕ್ತಪಡಿಸಿದರು.

ಕರ್ಪೆ ಗ್ರಾಮದ ಕಿನ್ನಾಜೆ, ನಡಿಬೈಲು, ಕಲ್ಲಾಪು, ಪೂವಳ ಪರಿಸರದಲ್ಲಿ ಕೋತಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಅರಣ್ಯ ಇಲಾಖೆಗೆ ಹಲವು ಬಾರಿ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಅರಣ್ಯ ಇಲಾಖಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪಡಿತರ ಚೀಟಿ ಸಮಸ್ಯೆ ನಿವಾರಣೆಗೆ ಹಾಗೂ ಸಿದ್ದಕಟ್ಟೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸಭೆ ನಿರ್ಣಯ ಕೈಗೊಂಡಿತು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಮಾತನಾಡಿ, “ಗ್ರಾಮ ಸಭೆ ಎಂದರೆ ಹಳ್ಳಿಯ ವಿಧಾನ ಸಭೆ. ಇದರಲ್ಲಿ ಜನಸಾಮಾನ್ಯರು ಕಡ್ಡಾಯವಾಗಿ ಭಾಗವಹಿಸಿ ಗ್ರಾಮದ ಅಭಿವೃದ್ಧಿ ಮತ್ತು ಇನ್ನಿತರ ಕುಂದು ಕೊರತೆಗಳ ಬಗ್ಗೆ ಧ್ವನಿ ಎತ್ತುವುದರ ಮೂಲಕ ಸ್ವಚ್ಚ, ಮಾದರಿ ಗ್ರಾಮ ಪಂಚಾಯತನ್ನಾಗಿ ರೂಪಿಸಲು ಸಹಕಾರಿಯಾಗಬೇಕು” ಎಂದರು.