ಮಳೆನೀರು ಹರಿಯುವ ಚರಂಡಿ ಮುಚ್ಚಿದರೂ ಕ್ರಮಕೈಗೊಳ್ಳದ ಉಚ್ಚಿಲ ಗ್ರಾಮ ಪಂಚಾಯತ್

ಉಚ್ಚಿಲ ಪಣಿಯೂರು ರಸ್ತೆಯ ಚರಂಡಿಯನ್ನು ಮುಚ್ಚಿರುವುದು

ಗ್ರಾಮಸ್ಥರ ಆಕ್ರೋಶ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಉಚ್ಚಿಲ ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೊಲ್ಯ ಜನಪ್ರಿಯ ಮರದ ಮಿಲ್ ಎದುರಿನ ರಸ್ತೆಯ ಪಕ್ಕದಲ್ಲಿ ಮಳೆಗಾಲದಲ್ಲಿ ನೀರು ಹರಿಯುವ ಚರಂಡಿಯೊಂದಿದ್ದು, ಸ್ಥಳೀಯ ಕೆಲವರು ಮಣ್ಣು ಹಾಕಿ ಮುಚ್ಚಿದ್ದು ಈ ಬಗ್ಗೆ ಗ್ರಾ ಪಂ ಪಿಡಿಒ ಗಮನಕ್ಕೆ ತಂದರೂ ಅವರು ಯಾವುದೇ ಕ್ರಮಕ್ಕೆ ಮುಂದಾಗದಿರುವುದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚರಂಡಿ ಮುಚ್ಚಿದ ಪ್ರಕರಣ ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಸ್ಥಳೀಯ ನಿವಾಸಿಗಳು ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಕಚೇರಿಗೆ ತೆರಳಿ ಅಲ್ಲಿಯ ಅಭಿವೃದ್ಧಿ ಅಧಿಕಾರಿ ಕುಶಾಲಿನಿ ಎಂಬವರ ಗಮನಕ್ಕೆ ತಂದಾಗ, ಗ್ರಾಮ ಪಂಚಾಯತ್ ಬಿಲ್ ವಸೂಲಿಗಾರ ನನಗೀಗ ಮಾಹಿತಿ ನೀಡಿದ್ದಾನೆ ಎಂದಿದ್ದರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ಮುಂದಾಗದೆ ಕರ್ತವ್ಯ ಮರೆತಿದ್ದಾರೆ ಎಂಬುದಾಗಿ ಪಿಡಿಒ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಚರಂಡಿ ಮುಚ್ಚುವ ಅಧಿಕೃತ ಕಾಮಗಾರಿ ಮುಗಿದ ಬಳಿಕ ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಪಿಡಿಒ ಸಾರ್ವಜನಿಕರ ಪ್ರಶ್ನೆಗೆ ಉಢಾಪೆಯಾಗಿ ಉತ್ತರಿಸಿ, “ನದಿಯನ್ನೇ ಮುಚ್ಚಿದ್ದಾರೆ ಎಂಬಂತೆ ಹಾರಾಡಿದ್ದೀರಿ, ಚರಂಡಿಯಲ್ಲವೇ… ಈಗ ಮಳೆ ಇಲ್ಲವಲ್ಲ, ಮಳೆ ಬಂದಾಗ ನೋಡೋಣ, ಈಗ ಸಮಸ್ಯೆ ಇಲ್ಲ” ಎಂಬುದಾಗಿ ಹೇಳಿ ಸ್ಥಳೀಯರನ್ನು ಕೆರಳಿಸಿದ್ದಾರೆ.

ಚರಂಡಿ ಮುಚ್ಚಿದ ಬಗ್ಗೆ ಸ್ಥಳೀಯರನ್ನು ಕೇಳಿದಾಗ, “ಚರಂಡಿ ಅಗತ್ಯಕ್ಕಿಂತ ಜಾಸ್ತಿ ಅಗಲವಿತ್ತು, ದ್ವಿಚಕ್ರ ವಾಹನಗಳು ಇದಕ್ಕೆ ಬಿದ್ದು ಬಹಳಷ್ಟು ಮಂದಿ ಗಾಯಗೊಂಡಿದ್ದರಿಂದ ಚರಂಡಿಯನ್ನು ಮುಚ್ಚಿದ್ದೇವೆ” ಎಂದಿದ್ದಾರೆ.

ಅಂತಿಮವಾಗಿ ಸ್ಥಳೀಯರ ಒತ್ತಡಕ್ಕೆ ಮಣಿದ ಪಿಡಿಒ, ಅಗಲ ಕಿರಿದಾದ ಚರಂಡಿ ನಿರ್ಮಿಸುವಂತೆ ಚರಂಡಿ ಮುಚ್ಚಿದವರಿಗೆ ನೋಟಿಸು ನೀಡಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ತಂತ್ರ ನಡೆಸಿದ್ದಾರೆ ಎಂಬುದಾಗಿ ಪಿಡಿಒ ವಿರುದ್ಧ ಸ್ಥಳೀಯ ಜನರು ಆರೋಪಿಸಿದ್ದಾರೆ.