ಕುಡಿಯುವ ನೀರು ಪೂರೈಸದ ಪಡುಪಣಂಬೂರು ಪಂಚಾಯತ್ ವಿರುದ್ಧ ಗ್ರಾಮಸ್ಥರ ಆಕ್ರೋಶ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಇಲ್ಲಿನ ಪಡುಪಣಂಬೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಪಂಚಾಯತಿ ನಿಲ್ರ್ಯಕ್ಷ ತೋರುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಪಡುಪಣಂಬೂರು ಪಂಚಾಯತಿಯ ಲೈಟ್ ಹೌಸ್ ಬಳಿಯ ಓಂಕಾರೇಶ್ವರ ಕಾಲೊನಿ ಬಳಿ ಕಳೆದ ಎರಡು ವಾರದಿಂದ ಶೇಡಿಮಣ್ಣಿನ ಮಿಶ್ರಿತ ನೀರು ಬರುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಪಂಚಾಯತಿಯ ನೀರು ಬಿಡುವವರ ಬಳಿ ಹೇಳಿದರೂ ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಪಡುಪಣಂಬೂರು ಪಂಚಾಯತಿ ವ್ಯಾಪ್ತಿಯ ಬೆಳ್ಳಾಯರು ಎರಡನೇ ವಾರ್ಡಿನ ಮಾಗಂದಡಿ ಎಂಬಲ್ಲಿ ಹೊಸ ಪೈಪ್ ಲೈನ್ ಮಾಡಿದರೂ ಕಳೆದ 6 ತಿಂಗಳಿನಿಂದ ನೀರು ಬರುತ್ತಿಲ್ಲ ಎಂದು ಸ್ಥಳೀಯ ಗ್ರಾಮಸ್ಥೆ ಪುಷ್ಪಾವತಿ ಹೇಳಿದ್ದಾರೆ. ಈ ಬಗ್ಗೆ ಪಂಚಾಯತಿ ಅಧ್ಯಕ್ಷರಿಗೆ ದೂರು ನೀಡಿದರೂ ಇದುವರೆಗೂ ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಪಂಚಾಯತಿ ಸದಸ್ಯರಿಗೆ ಸಂಪರ್ಕಿಸಲು ಯತ್ನಿಸಿದರೂ ಫಲಕಾರಿಯಾಗಿಲ್ಲ, ಕೂಡಲೇ ಪಂಚಾಯತಿ ಅಧ್ಯಕ್ಷರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಇಲ್ಲದಿದ್ದರೆ ಪಂಚಾಯತಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.