ರಾಯಿ ಗ್ರಾಮ ಸಭೆ : ಧಿಕ್ಕಾರ ಕೂಗಿದ ಗ್ರಾಮಸ್ಥರು

ಪಿಡಿಒ ವೆಂಕಟೇಶ ವರ್ಗಾಯಿಸಲು ನಿರ್ಣಯ

ಬಂಟ್ವಾಳ : ಇಲ್ಲಿನ ರಾಯಿ ಗ್ರಾಮ ಪಂಚಾಯಿತಿನಲ್ಲಿ ಕಳೆದ ಮೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ವೆಂಕಟೇಶ ಅವರು ಪಂಚಾಯಿತಿ ಅಭಿವೃದ್ಧಿ ಮತ್ತು ನಾಗರಿಕರಿಗೆ ಮೂಲಭೂತ ಸೌಕರ್ಯ ಒದಗಿಸುವತ್ತ ಗಮನ ಹರಿಸದೆ ಪ್ರತಿಯೊಂದಕ್ಕೂ ಹಣ ನೀಡುವಂತೆ ಪೀಡಿಸುತ್ತಿದ್ದಾರೆ ಎಂದು ಆರೋಪಿಸಿ ನಾಗರಿಕರು ಗ್ರಾಮಸಭೆಯಲ್ಲೇ ಭಿತ್ತಿಪತ್ರ ಹಿಡಿದು ಧಿಕ್ಕಾರ ಕೂಗಿದರು.

ರಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದಯಾನಂದ ಸಪಲ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ಗ್ರಾಮಸಭೆಯಲ್ಲಿ ನಾಗರಿಕರು ಪಿಡಿಒ ವಿರುದ್ಧ ವಿವಿಧ ಭಿತ್ತಿಪತ್ರ ಪ್ರದರ್ಶಿಸಿ ಧಿಕ್ಕಾರ ಕೂಗುತ್ತಾ ಅವರ ವರ್ಗಾವಣೆಗೆ ಆಗ್ರಹಿಸಿದರು.

ಇಲ್ಲಿನ ಕುದ್ಕೋಳಿ ನಿವಾಸಿ ಆಲ್ಫೋನ್ಸ್ ಕುವೆಲ್ಲೊ ಮಾತನಾಡಿ, “ನನ್ನ ಮನೆಗೆ ಕದ ನಂಬ್ರ ನೀಡಲು ಪಿಡಿಒ ವೆಂಕಟೇಶ ರೂ 10 ಸಾವಿರ ರೂ ನೀಡುವಂತೆ ಬೇಡಿಕೆಯಿಟ್ಟು ಬಳಿಕ ರೂ 5 ಸಾವಿರ ರೂ ಮೊತ್ತ ಪಡೆದುಕೊಂಡಿದ್ದಾರೆ” ಎಂದು ಆರೋಪಿಸಿದರು. ಇಲ್ಲಿನ ದಡ್ಡು ನಿವಾಸಿ ವೀರಪ್ಪ ಪೂಜಾರಿ ಮಾತನಾಡಿ, “ಸರ್ಕಾರದ ವಸತಿ ಯೋಜನೆಯಡಿ ಮಂಜೂರಾದ ಅನುದಾನದಲ್ಲಿ ಕಂತಿನ ಹಣ ನನಗೆ ಪಾವತಿಸಲು ರೂ 10 ಸಾವಿರ ರೂ ಲಂಚ ಕೇಳಿದ್ದಾರೆ” ಎಂದು ಆರೋಪಿಸಿದರು.

 

ದೈಲ ದಕಾಸ್ತು ಮತ್ತು ರಾಯಿ ಮಾಬೆಟ್ಟು ಎಂಬಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ನಾಲ್ಕೈದು ದಿನ ನೀರು ಪೆÇೀಲಾಗುತ್ತಿದ್ದರೂ ದುರಸ್ತಿಗೊಳಿಸಲು ಕಾರ್ಮಿಕರಿಲ್ಲ. ತುರ್ತು ದುರಸ್ತಿ ಕಾಮಗಾರಿಗೆ ಸಾಮಗ್ರಿ ಖರೀದಿಸಲು ಪಿಡಿಒ ಅನುಮತಿ ಬೇಕು ಎಂಬ ನೆಪದಲ್ಲಿ ನಾಗರಿಕರ ಮೂಲಭೂತ ಸೌಕರ್ಯಕ್ಕೂ ಅಡ್ಡಿಪಡಿಸುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳಾದ ಶೋಭಾ, ಹೇಮಾವತಿ, ಪರಮೇಶ್ವರ ಪೂಜಾರಿ ಮತ್ತಿತರರು ದೂರಿದರು.

ಇನ್ನೊಂದೆಡೆ ದೈಲ ನಿವಾಸಿ ನಾಗವೇಣಿ ಎಂಬವರು ತನಗೆ ಹಟ್ಟಿ ನಿರ್ಮಿಸಲು ಕಳೆದ ವರ್ಷ ಉದ್ಯೋಗ ಖಾತರಿ ಯೋಜನೆಯಡಿ ಮಂಜೂರಾದ ಹಣದ ಕಂತು ಪಾವತಿಸಿಲ್ಲ ಎಂದು ಅಳಲು ತೋಡಿಕೊಂಡರು.

“ಅಣ್ಣಳಿಕೆ ಎಂಬಲ್ಲಿ ನಿರ್ಮಿಸಿದ ಸಾರ್ವಜನಿಕ ಶೌಚಾಲಯ ಸಾರ್ವಜನಿಕರಿಗೆ ಬಿಟ್ಟುಕೊಡುವ ವೇಳೆ ಕನಿಷ್ಟ ನನ್ನ ಗಮನಕ್ಕೂ ತಂದಿಲ್ಲ” ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯೆ ಕುಸುಮಾ ದೂರಿದರು.  ಇದೇ ವೇಳೆ “ಬಸವ ವಸತಿ ಯೋಜನೆಯಡಿ ಆಯ್ಕೆಗೊಳಿಸಿದ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಇಲ್ಲಿನ ಸದಸ್ಯರ ಗಮನಕ್ಕೆ ತಾರದೆ ಮತ್ತೆ ಪಿಡಿಒ ತಿದ್ದುಪಡಿಗೊಳಿಸುವ ಮೂಲಕ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಈ ರೀತಿ ಆಡಳಿತದಲ್ಲಿ ಪಿಡಿಒ ಅನಗತ್ಯ ಹಸ್ತಕ್ಷೇಪ ಉಂಟು ಮಾಡುತ್ತಾ ಪಂಚಾಯಿತಿ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದ್ದಾರೆ” ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ದಯಾನಂದ ಸಪಲ್ಯ, ಉಪಾಧ್ಯಕ್ಷೆ ಪುಷ್ಪಾವತಿ, ಸದಸ್ಯರಾದ ಹರೀಶ ಆಚಾರ್ಯ, ರಾಘವ ಅಮೀನ್, ನಿರುಪಮಾ ಎಸ್ ಭಂಡಾರಿ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ವಿವಿಧ ಅವ್ಯವಹಾರ ಮತ್ತು ಕರ್ತವ್ಯಲೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಂದ ಒಂದು ವರ್ಷದ ವೇತನ ಬಡ್ತಿಗೆ ತಡೆ ಶಿಕ್ಷೆಗೊಳಗಾಗಿದ್ದರೂ ಸ್ಥಳೀಯ ದೇವಾಲಯಗಳಲ್ಲಿ ಪ್ರಭಾರ ಆಡಳಿತಾಧಿಕಾರಿ  ಎಂಬ ನೆಪದಲ್ಲಿ ಅಲ್ಲಿಯೂ ಕೆಲವೊಂದು ಜಾತಿ ಸಮುದಾಯಗಳ ನಡುವೆ ಅನಗತ್ಯ ವೈಷಮ್ಯ ಉಂಟು ಮಾಡಿದ್ದಾರೆ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ವಸಂತ ಕುಮಾರ್ ಅಣ್ಣಳಿಕೆ ಮತ್ತಿತರರು ತರಾಟೆಗೆ ತೆಗೆದುಕೊಂಡರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ದಾರಿದೀಪ ಉರಿಯುತ್ತಿಲ್ಲ, ಅಣ್ಣಳಿಕೆ ಸಾರ್ವಜನಿಕ ಬಾವಿ ದುರಸ್ತಿಗೊಳಿಸಲು ಪಿಡಿಒ ಹಿಂದೇಟು ಹಾಕುತ್ತಿದ್ದಾರೆ ಎಂದು ರಾಮಚಂದ್ರ ಶೆಟ್ಟಿಗಾರ್ ದೂರಿದರು.

ವರ್ಗಾವಣೆಗೆ ನಿರ್ಣಯ

`ಇಲ್ಲಿನ ಬಹುತೇಕ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರು ಸಹಿತ ನಾಗರಿಕರ ಒಕ್ಕೊರಳ ಬೇಡಿಕೆ ಮತ್ತು ಪಂಚಾಯಿತಿ ಹಿತದೃಷ್ಟಿಯಿಂದ ಪಿಡಿಒ ವೆಂಕಟೇಶ ಅವರನ್ನು ವರ್ಗಾವವಣೆಗೊಳಿಸುವುದು ಸೂಕ್ತ’ ಎಂಬ ನಿರ್ಣಯ ಕೈಗೊಳ್ಳಲಾಗಿದೆ ಎಂದು ನೋಡೆಲ್ ಅಧಿಕಾರಿ, ಕೃಷಿ ಸಹಾಯಕ ನಿರ್ದೇಶಕ ಪಿ ಎಫ್ ಮಿರಾಂದ ಸಭೆಯಲ್ಲಿ ಪ್ರಕಟಿಸಿದರು. ಇದೇ ವೇಳೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಸೂಕ್ತ ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಪದ್ಮನಾಭ ಗೌಡ, ಜಗದೀಶ ಕೊಯಿಲ, ಶೋಭಾ ಎನ್ ಸಪಲ್ಯ, ಸುನಂದ, ಯಶೋಧ, ಮಾಜಿ ಅಧ್ಯಕ್ಷ ಜಿ ದಾಮೋದರ ಬಂಗೇರ, ಪ್ರಮುಖರಾದ ಅನಂತ ರಾವ್ ಕೊಯಿಲಗುತ್ತು, ಎಂ ದುರ್ಗಾದಾಸ್ ಶೆಟ್ಟಿ ಮಾವಂತೂರು, ಸಂತೋಷಕುಮಾರ್ ಬೆಟ್ಟು, ತಿಮ್ಮಪ್ಪ ಪೂಜಾರಿ ಕೊಯಿಲ, ಕೇಶವ ಪೂಜಾರಿ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.