ದೇವಳದಲ್ಲಿ ಆಶ್ರಯ ಪಡೆದ ಮೊಸಳೆ ರಕ್ಷಿಸಿದ ಗ್ರಾಮಸ್ಥರು

 ಹುಬ್ಬಳ್ಳಿ :  ಆಹಾರ ಮತ್ತು ಆಶ್ರಯ ಪಡೆಯಲು ತಂಪಾದ ಸ್ಥಳವನ್ನು ಅರಸಿಕೊಂಡು ಬಾಗಲಕೋಟೆ ಜಿಲ್ಲೆಯ ಬಿಳಗಿ ತಾಲೂಕಿನ ಸೊನ್ನ ಗ್ರಾಮದ ಜನವಸತಿ ಪ್ರದೇಶಕ್ಕೆ  ನುಸುಳಿದ ಮೊಸಳೆಯೊಂದು ಅಲ್ಲಿನ  ಕೃಷ್ಣಾ ನದಿ ದಂಡೆಯಲ್ಲಿರುವ ದೇವಳವೊಂದರಲ್ಲಿ ಪತ್ತೆಯಾಗಿದ್ದು, ಸ್ಥಳೀಯರು ಅದನ್ನು ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ಗ್ರಾಮದ ಹೊರವಲಯದಲ್ಲಿರುವ ಪಾಳು ಬಿದ್ದಿರುವ ಹನುಮಾನ್ ದೇವಳದ ಗರ್ಭಗುಡಿಯೊಳಗೆ ತಾನು ಸುರಕ್ಷಿತವಾಗಿದ್ದೇನೆಂದು ಈ ಮೊಸಳೆ ಅಂದುಕೊಳ್ಳುವಷ್ಟರಲ್ಲಿ ಗ್ರಾಮಸ್ಥರೊಬ್ಬರು ಅದನ್ನು ಗಮನಿಸಿ ಇತರರಿಗೆ ಮಾಹಿತಿ ನೀಡಿದ್ದಾರೆ. ನಂತರ ಅವರೆಲ್ಲ ಜತೆಯಾಗಿ ಹಗ್ಗದ ಸಹಾಯದಿಂದ ಮೊಸಳೆಯನ್ನು ಗರ್ಭಗುಡಿಯಿಂದ ಹೊರಗೆಳೆದಿದ್ದಾರೆ. ಅರಣ್ಯಾಧಿಕಾರಿಗಳು ಈ ಮೊಸಳೆಯನ್ನು ಘಟಪ್ರಭಾ ಹಾಗೂ ಕೃಷ್ಣಾ ನದಿಗಳ ಸಂಗಮ ಸ್ಥಳ- ಚಿಕ್ಕಸಂಗಮದಲ್ಲಿ ನೀರಿನಲ್ಲಿ ಬಿಡುಗಡೆಗೊಳಿಸಿದ್ದಾರೆ.

ಇನ್ನೊಂದು ಘಟನೆಯಲ್ಲಿ  ಆಹಾರ ಮತ್ತು ನೀರಿಲ್ಲದೆ ಬಸವಳಿದು ಹೋಗಿದ್ದ ಮೊಸಳೆಯೊಂದನ್ನು ಹತ್ತಿರದ ಕೊರ್ಟಿ ಗ್ರಾಮಸ್ಥರು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.