ಕುಡಿಯುವ ನೀರು ಆಗ್ರಹಿಸಿ ಪಂ ಕಚೇರಿಗೆ ಗ್ರಾಮಸ್ಥರ ಮುತ್ತಿಗೆ

ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

ನಮ್ಮ ಪ್ರತಿನಿಧಿ ವರದಿ

ಪುತ್ತೂರು : 6 ತಿಂಗಳಿಂದ ಸಮರ್ಪಕವಾಗಿ ಕುಡಿಯುವ ನೀರು ವಿತರಣೆ ಮಾಡಿಲ್ಲ ಎಂದು ಆರೋಪಿಸಿ ಒಳಮೊಗ್ರು ಗ್ರಾಮದ ಬೊಳ್ಳಾಡಿ, ಅಲಂಗೂರು ಶೇಕಮಲೆ ನಿವಾಸಿಗಳು ಗ್ರಾಮ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

“ಗ್ರಾ ಪಂ ಕಚೇರಿಗೆ ತಾಗಿಕೊಂಡೇ ಇರುವ ಶೇಕಮಲೆಯಲ್ಲಿ, ಬೊಳ್ಳಾಡಿ ಹಾಗೂ ಅಲಂಗೂರಿನಲ್ಲಿ ಕಳೆದ 6 ತಿಂಗಳಿನಿಂದ ನೀರಿಲ್ಲ, ಈ ಬಗ್ಗೆ ಪಂಚಾಯಿತಿಯಲ್ಲಿ ಬಂದು ಕೇಳಿದರೆ ಹೊಸ ಪೈಪ್ ಲೈನ್ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳುತ್ತಲೇ ಇದ್ದು, 6 ತಿಂಗಳಿನಿಂದಲೂ ಇವರಿಗೆ ಪೈಪ್ ಹಾಕಲು ಸಾಧ್ಯವಾಗಿಲ್ಲ. ಕಳೆದ 17 ದಿನಗಳಿಂದ ನಳ್ಳಿಯಲ್ಲಿ ಒಂದು ತೊಟ್ಟು ನೀರು ಬಂದಿಲ್ಲ, ಕೇಳಿದರೆ ಸಮರ್ಪಕ ಉತ್ತರವಿಲ್ಲ” ಎಂದು ಆರೋಪಿಸಿದ ಗ್ರಾಮಸ್ಥರು, “ನಮಗೆ ನೀರಿನ ವ್ಯವಸ್ಥೆ ಮಾಡದೇ ಇದ್ದರೆ ಕಚೇರಿ ಮುಂದೆ ಅಹೋರಾತ್ರಿ ಪ್ರತಿಭಟನೆ ನಡೆಸುತ್ತೇವೆ” ಎಂದು ಎಚ್ಚರಿಸಿದರು.

ಈ ವೇಳೆ ಪ್ರತಿಭಟನಾಕಾರರ ಜೊತೆ ಮಾತನಾಡಿದ ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಅರಿಯಡ್ಕ, “ನಾವು ನೀರು ಇದ್ದು ನಿಮಗೆ ಕೊಡದೇ ಇರುವುದಲ್ಲ, ಬೋರ್ವೆಲ್ ತೆಗೆದರೆ ಅದರಲ್ಲಿಯೂ ನೀರು ಸಿಗುತ್ತಿಲ್ಲ, ಎರಡು ಬೋರ್ ತೆಗೆದಿದ್ದೇವೆ ಅದರಲ್ಲಿ ನೀರು ಸಿಕ್ಕಿಲ್ಲ, ಈಗ ಗ್ರಾ ಪಂ.ನಲ್ಲಿ ಅನುದಾನವಿಲ್ಲ. ಶಾಸಕರು ಅಥವಾ ಜಿ ಪಂ ಅನುದಾನ ನೀಡಿದರೆ ನಾವು ಇನ್ನೊಂದು ಬೋರ್ ತೆಗೆದು ನಿಮಗೆ ನೀರು ಕೊಡುವ ವ್ಯವಸ್ಥೆ ಮಾಡಲಿದ್ದೇವೆ, ನೀರು ಇಲ್ಲ ಎಂದು ಪ್ರತಿಭಟನೆ ಮಾಡುವುದು ನಿಮ್ಮ ಹಕ್ಕು, ಆದರೆ ಅನುದಾನವಿಲ್ಲದ ಕಾರಣ ಏನು ವ್ಯವಸ್ಥೆ ಮಾಡುವುದು” ಎಂದು ಪ್ರತಿಭಟನಾಕಾರರನ್ನೇ ಪ್ರಶ್ನಿಸಿದರು.

“ಇರುವ ನೀರನ್ನು ಎಲ್ಲರಿಗೂ ನೀಡುತ್ತೇವೆ, ಯಾರೂ ಕುಡಿಯುವ ನೀರನ್ನು ಕೃಷಿಗೆ ಬಳಸಬೇಡಿ, ನಿಮ್ಮೊಳಗೆ ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಸಮಸ್ಯೆಯನ್ನು ಬಗೆಹರಿಸಿ” ಎಂದು ಹೇಳಿದರು.

“ಸಮಸ್ಯೆ ಇರುವ ಕಡೆಗಳಲ್ಲಿ ಗ್ರಾ ಪಂ ಅಧಿಕಾರಿಗಳು ಭೇಟಿ ನೀಡಿ ನೀರು ಪೋಲು ಮಾಡುತ್ತಿರುವ ಮನೆಗಳ ಸಂಪರ್ಕವನ್ನು ಕಡಿತ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಅನಗತ್ಯವಾಗಿ ನೀರನ್ನು ಪೋಲು ಮಾಡುವುದು, ಕಟ್ಟಡ ಕಾಮಗಾರಿಗೆ ಬಳಕೆ ಮಾಡುವುದನ್ನು ನಾವು ನಿಷೇಧ ಮಾಡಿದ್ದೇವೆ. ಆದರೂ ಕದ್ದುಮುಚ್ಚಿ ನೀರನ್ನು ವ್ಯರ್ಥ ಮಾಡುತ್ತಾರೆ. ಅಂಥವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು” ಎಂದು ಅಧ್ಯಕ್ಷ ಯತಿರಾಜ ರೈ ಹೇಳಿದರು.

ಬಳಿಕ ನೀರು ಬಿಡುವ ವ್ಯಕ್ತಿಯನ್ನು ಬದಲಾವಣೆ ಮಾಡುವ ಮೂಲಕ ತಾತ್ಕಾಲಿಕ ಪರಿಹಾರ ಸೂತ್ರವನ್ನು ಕಂಡುಕೊಳ್ಳಲಾಯಿತು. ಪುತ್ತೂರು ಗ್ರಾಮಾಂತರ ಪೊಲೀಸರು ಬಂದೋಬಸ್ತ್ ಮಾಡಿದ್ದರು.