ಇರುವೈಲು ಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

ನೀರಿನ ಸಂಪರ್ಕ ಕಡಿತ ವಿರೋಧಿಸಿ ಪ್ರತಿಭಟಿಸಿದ ದಲಿತರು

ನೀರಿನ ಸಂಪರ್ಕ ಕಡಿತಗೊಳಿಸಿದ್ದಕ್ಕೆ ಆಕ್ರೋಶ

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ತೋಡಾರು ಕಂದೊಟ್ಟು ಪರಿಸರದ ದಲಿತ ಕಾಲೊನಿಯ 13 ಮನೆಗಳಿಗೆ ನೀರಿನ ಸಂಪರ್ಕವನ್ನು ಕಡಿತಗೊಳಿಸಿರುವುದರನ್ನು ವಿರೋಧಿಸಿ ದ ಕ ಜಿಲ್ಲೆ ದಲಿತ ಹಕ್ಕುಗಳ ಸಮಿತಿ ಹಾಗೂ ಸಿಪಿಐಎಂ ನೇತೃತ್ವದಲ್ಲಿ ಸಂತ್ರಸ್ತರು ಶುಕ್ರವಾರ ಇರುವೈಲು ಗ್ರಾಮ ಪಂಚಾಯತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಈ ಹಿಂದೆ ಪಂಚಾಯತಿನಿಂದ ದಲಿತ ಕಾಲೊನಿಗೆ ನೀರಿನ ಸಂಪರ್ಕವನ್ನು ಕಲ್ಪಿಸಲಾಗಿತ್ತು. ನೀರಿನ ಬಿಲ್ಲನ್ನು ಪಂಚಾಯತಿಗೆ ಪಾವತಿಸದೆ ಇರುವುದರಿಂದ ಸಂಪರ್ಕ ಕಡಿತಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಸಂತ್ರಸ್ತರು ದಲಿತ ಹಕ್ಕುಗಳ ಸಮಿತಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಗುರುವಾರದಂದು ಪಂಚಾಯತಿನ ಎದುರುಗಡೆ ಪ್ರತಿಭಟನೆ ನಡೆಸಿ ಕಡಿತಗೊಳಿಸಿರುವ ನೀರಿನ ಸಂಪರ್ಕವನ್ನು ಮರು ಸಂಪರ್ಕಗೊಳಿಸುವಂತೆ ಒತ್ತಾಯಿಸಿದ್ದರು. ಆದರೆ ಪಂಚಾಯತ್ ಆಡಳಿತ ಸಕಾರಾತ್ಮಕವಾಗಿ ಸ್ಪಂದಿಸದಕ್ಕೆ ಶುಕ್ರವಾರ ಸಂತ್ರಸ್ತ ದಲಿತರು ಪ್ರತಿಭಟನೆ ನಡೆಸಿ ಪಂಚಾಯತ್ ಕಚೇರಿಗೆ ಬೀಗ ಜಡಿದರು.

ಪ್ರತಿಭಟನಾಕಾರರ ಅತಿರೇಕದ ವರ್ತನೆಗೆ ಪಿಡಿಒ ಯಶವಂತ ಮತ್ತು ಅಧ್ಯಕ್ಷೆ ನವೀನ ಆಕ್ಷೇಪ ವ್ಯಕ್ತಪಡಿಸಿದರು. ನಂತರ ತಹಶೀಲ್ದಾರ್ ಮಹಮ್ಮದ್ ಇಸಾಕ್ ಸ್ಥಳಕ್ಕೆ ಭೇಟಿ ನೀಡಿ, “ಬೀಗ ತೆಗೆಯಿರಿ, ಕುಳಿತು ಮಾತಾಡೋಣ” ಎಂದು ಹೇಳಿದಾಗ ಪ್ರತಿಭಟನಾಕಾರರು ಬೀಗ ತೆಗೆದರು.

ತಾತ್ಕಾಲಿಕವಾಗಿ ನೀರಿನ ಸಂಪರ್ಕ ನೀಡುವಂತೆ ತಹಶೀಲ್ದಾರ್ ಪಿಡಿಒಗೆ ಸೂಚಿಸಿದಾಗ ಪ್ರತಿಭಟನಾಕಾರರು ಒಪ್ಪಿ ಪ್ರತಿಭಟನೆ ಕೈಬಿಟ್ಟರು.