ರಸ್ತೆ ಕಾಮಗಾರಿ ನೆನೆಗುದಿಗೆ : ಪ್ರಧಾನಿಗೆ ದೂರು

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಹಲವಾರು ವರ್ಷಗಳಿಂದ ಡಾಮರು ಕಾಣದೆ ಹಾಕಿದ ಜಲ್ಲಿ ಕೂಡ ಕಿತ್ತುಹೋಗಿ ನಡೆದಾಡಲು ಕೂಡ ಸಾಧ್ಯವಾಗದಂತಹ ರಸ್ತೆಯನ್ನು ಸರಿಪಡಿಸುವಂತೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಬೇಸತ್ತ ಗ್ರಾಮಸ್ಥರು ಪ್ರಧಾನ ಮಂತ್ರಿಗೆ ನೇರವಾಗಿ ದೂರು ಸಲ್ಲಿಸಿದರು. .

ಜನಪ್ರತಿನಿಧಿಗಳ ನಿರ್ಲಕ್ಷ್ಯ ಹಾಗೂ ಸ್ಥಳೀಯ ರಾಜಕಾರಣದಿಂದ 5 ಕಿ ಮೀ ದೂರದ ಕಳ್ತೂರು ಸಂತೆಕಟ್ಟೆ ರಾಮಮಂದಿರ-ಜೆಡ್ಡುಬೈಲು-ಅಸ್ರಂಬಳ್ಳಿ ರಸ್ತೆ ಸಂಪೂರ್ಣ ಕೆಟ್ಟುಹೋಗಿದೆ. ಕಳೆದ 10 ವರ್ಷಗಳಿಂದ ಸ್ಥಳೀಯ, ಗ್ರಾ ಪಂ, ಜಿ ಪಂ, ತಾ ಪಂ ಶಾಸಕರು, ಸಂಸದರು, ಸಚಿವರು ಎಂಬ ಬೇಧಭಾವವಿಲ್ಲದೆ ರಸ್ತೆ ದುರಸ್ತಿಗೆ ಒತ್ತಾಯಿಸಿದರೂ ಫಲಕಾರಿಯಾಗದ ಹಿನ್ನೆಲೆಯಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಹಳ್ಳಿ ಗಣಪತಿ ಶೆಟ್ಟಿ ನೇತೃತ್ವದಲ್ಲಿ ಸುಮಾರು 40ಕ್ಕೂ ಹೆಚ್ಚಿನ ಸ್ಥಳಿಯರು ಲಿಖಿತ ಮನವಿ ಮುಖೇನ ಪ್ರಧಾನಿಗೆ ದೂರು ಸಲ್ಲಿಸಿದ್ದಾರೆ.

ಪರಿಶಿಷ್ಟ ಪಂಗಡದ ಜನರೇ ಹೆಚ್ಚಾಗಿ ಇರುವ ಪ್ರದೇಶದ ಈ ರಸ್ತೆ ವರ್ಷವಿಡೀ ಸಂಚಾರಕ್ಕೆ ಯೋಗ್ಯವಾಗಿರುವುದಿಲ್ಲ. ಅವಕಾಶವಾದಿ ರಾಜಕಾರಣದಿಂದ ಬೇಸತ್ತ ಮಂದಿ ತಮ್ಮ ಕೊನೆಯ ಪ್ರಯತ್ನವಾಗಿ ರಸ್ತೆ ಅಭಿವೃದ್ಧಿಗೆ ಪ್ರಧಾನಿ ಕಚೇರಿಯನ್ನು ಸಂಪರ್ಕಿಸಿದ್ದಾರೆ. ಈ ಪ್ರದೇಶ ಕಾರ್ಕಳ ತಾಲೂಕಿನ ಗಡಿ ವ್ಯಾಪ್ತಿಗೆ ಬರುವ ಶಿವಪುರ ಪಾಂಡುಕಲ್ಲು ರಸ್ತೆ, ಶಿವಪುರ ಮಂಡಾಡಿಜೆಡ್ಡು ರಸ್ತೆಯನ್ನು ಈಗಾಗಲೇ ಕೇಂದ್ರ ರಸ್ತೆ ನಿಧಿಯಿಂದ 2 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಮುಂದಾಗಿದ್ದರೂ ಜೆಡ್ಡುಬೈಲು, ಅಸ್ರಂಬಳ್ಳಿ ರಸ್ತೆ ಅಭಿವೃದ್ಧಿಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ.

ಅಲ್ಲದೆ ಕಳ್ತೂರು ಗ್ರಾಮಕ್ಕೆ ರುದ್ರಭೂಮಿಯೂ ಇಲ್ಲದೆ ಜನರಿಗೆ ಶವ ಸಂಸ್ಕಾರಕ್ಕೂ ತುಂಬಾ ತೊಂದರೆಯಾಗುತ್ತಿದೆ. ಕೆಲದಿನಗಳ ಹಿಂದೆಯಷ್ಟೇ ನಿಧನರಾದ ವ್ಯಕ್ತಿಯ ಶವವನ್ನು ಕೆಲವೇ ತಿಂಗಳ ಹಿಂದೆ ಮೃತಪಟ್ಟ ಅದೇ ಮನೆಯ ವ್ಯಕ್ತಿಯ ಶವ ಸಂಸ್ಕಾರ ಮಾಡಿದ ಸ್ಥಳದಲ್ಲೇ ಮಾಡಬೇಕಾಗಿರುವುದು ಗ್ರಾಮಸ್ಥರನ್ನು ಸಂಕಷ್ಟಕ್ಕೀಡುಮಾಡಿದೆ. ಇಲ್ಲಿನ ಗ್ರಾಮ ದೇವಸ್ಥಾನ ಕೂಡಾ ಅಭಿವೃದ್ಧಿಯಾಗದ ಸ್ಥಿತಿಯಲ್ಲಿ ಮುಂದುವರಿಯುತ್ತಿದ್ದು, ಅಭಿವೃದ್ಧಿ ಕಾಣದ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.