ವಿಟ್ಲ ಮುಡ್ನೂರು ಗ್ರಾಮಸಭೆ ಬಹಿಷ್ಕಾರ

ಜಿ ಪಂ ಸದಸ್ಯೆ ಬಾರದಕ್ಕೆ ಜನಾಕ್ರೋಶ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಜಿ ಪಂ ಸದಸ್ಯೆ ಗೈರಾದ ಕಾರಣಕ್ಕಾಗಿ ವಿಟ್ಲ ಮುಡ್ನೂರು ಗ್ರಾಮಸಭೆಯನ್ನು ಗ್ರಾಮಸ್ಥರು ಬಹಿಷ್ಕರಿಸಿದರು.

ಕುಂಡಡ್ಕದಲ್ಲಿರುವ ಪಂ ಸಭಾಭವನದಲ್ಲಿ ವಿಟ್ಲ ಮುಡ್ನೂರು ಪಂ.ನ ಎರಡನೇ ಹಂತದ ಗ್ರಾಮಸಭೆಯನ್ನು ಆಯೋಜಿಸಲಾಗಿತ್ತು. ವಿವಿಧ ಇಲಾಖೆಯ ಅಧಿಕಾರಿಗಳು, ಪಂ ಸದಸ್ಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರೂ ಸ್ಥಳೀಯ ಜಿ ಪಂ ಸದಸ್ಯೆ ಇದುವರೆಗೂ ಬಂದಿಲ್ಲ. ಸಭೆ ಆರಂಭವಾಗುತ್ತಿದ್ದಂತೆ ನಮ್ಮ ಸಮಸ್ಯೆಗಳನ್ನು ಹೇಳಲು ಬರಬೇಕಾಗಿದ್ದ ಜನಪ್ರತಿನಿಧಿಗಳು ಗೈರಾದ ಕಾರಣ ಸಭೆಯನ್ನು ನಡೆಸಬಾರದು ಎಂದು ಗ್ರಾಮಸ್ಥರು ಮನವಿ ಮಾಡಿದ್ದರು.

ನೋಡಲ್ ಅಧಿಕಾರಿಯಾಗಿ ಬಂದಿದ್ದ ದಯಾವತಿಯವರು ಮಾತನಾಡುತ್ತಾ ಆರು ತಿಂಗಳಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಮತ್ತು ವಿವಿಧ ಯೋಜನೆಗಳ ಬಗ್ಗೆ ಚರ್ಚಿಸಲು ಅವಕಾಶ ಕೊಡಬೇಕೆಂದು ವಿನಂತಿಸಿದ್ದರೂ ಗ್ರಾಮಸ್ಥರು ಮಾತ್ರ ತಮ್ಮ ಪಟ್ಟು ಬಿಟ್ಟಿಲ್ಲ. ಈ ಸಂದರ್ಭ ಗ್ರಾಮಸ್ಥ ಎಲ್ಯಣ್ಣ ಪೂಜಾರಿ ಮಾತನಾಡುತ್ತಾ, “ಸ್ಥಳೀಯ ಜಿ ಪಂ ಸದಸ್ಯೆ ಚುನಾವಣೆ ನಡೆದ ಬಳಿಕ ಇತ್ತ ಕಡೆ ಕಾಲಿಟ್ಟಿಲ್ಲ. ಜನರ ನರಕಯಾತನೆಗೆ ಕಾರಣವಾದ ರಸ್ತೆ ಅಭಿವೃದ್ಧಿಗೂ ಅನುದಾನ ಬಿಡುಗಡೆ ಮಾಡಿಲ್ಲ. ಇದುವರೆಗೂ ಗ್ರಾಮ ಸಭೆಗೆ ಹಾಜರಾಗಿಲ್ಲದ ಕಾರಣ ಗ್ರಾಮಸಭೆಯನ್ನು ಬಹಿಷ್ಕರಿಸಬೇಕು” ಎಂದು ವಿನಂತಿಸಿದರು.

ಸಾರ್ವಜನಿಕರ ವಿನಂತಿಯ ಮೇರೆಗೆ ಗ್ರಾಮಸಭೆಯನ್ನು ಮುಂದೂಡಲು ಅಧಿಕಾರಿಗಳು ತೀರ್ಮಾನಿಸಿದರು.

 

 

LEAVE A REPLY