ವಿವಿಧ ಬೇಡಿಕೆ ಅಗ್ರಹಿಸಿ ರೈಲು ತಡೆದ ಗ್ರಾಮಸ್ಥರು

ವಿವಿಧ ಸಂಘಟನೆ ಮುಖಂಡರು ರೈಲು ತಡೆದು ಪ್ರತಿಭಟಿಸಿದರು

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ರೈಲು ನಿಲುಗಡೆಯೂ ಸೇರಿದಂತೆ ವಿವಿಧ ಬೇಡಿಕೆಯನ್ನು ಮುಂದಿಟ್ಟು ಕೋಡಿಂಬಾಳ ರೈಲ್ವೇ ಅಭಿವೃದ್ಧಿ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಕಡಬ ಸಮೀಪದ ಕೋಡಿಂಬಾಳ ರೈಲ್ವೇ ನಿಲ್ದಾಣದಲ್ಲಿ ಸಾಯಂಕಾಲ ಯಶವಂತಪುರ-ಕಾರವಾರ ರೈಲನ್ನು  ತಡೆದು ಪ್ರತಿಭಟನೆ ನಡೆಸಲಾಯಿತು.

ಹಗಲು ಮತ್ತು ರಾತ್ರಿ ಓಡಾಡುವ ರೈಲುಗಳು ಕೋಡಿಂಬಾಳದಲ್ಲಿ ನಿಲುಗಡೆಯಾಗಬೇಕು, ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ ಮೇಲ್ದೇಜೇರಿಸಬೇಕು, ಸುಸಜ್ಜಿತ ಶೌಚಲಯ ನಿರ್ಮಾಣ ಮಾಡಬೇಕು, ವಿದ್ಯುತ್ ಸಂಪರ್ಕ ನೀಡಬೇಕು ಮೊದಲಾದ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಕೋಡಿಂಬಾಳ ರ್ವೆಲ್ವೇ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್ ನೇತೃತ್ವದಲ್ಲಿ ರೈಲು ತಡೆಯಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಯ್ಯದ್ ಮೀರಾ ಸಾಹೇಬ್, “ಕೋಡಿಂಬಾಳ ರೈಲ್ವೇ ನಿಲ್ದಾಣ 1982ರಲ್ಲಿ ಪ್ರಾರಂಭವಾಗಿದೆ. ಈ ಹಿಂದೆ ಬೆಂಗಳೂರು-ಮಂಗಳೂರು ರೈಲು ಕೋಡಿಂಬಾಳದಲ್ಲಿ ನಿಲುಗಡೆಯಾಗುತ್ತಿತ್ತು. ಹಳಿಯು ಬ್ರಾಡ್ ಗೇಜಾಗಿ ಪರಿವರ್ತನೆಯಾದ ಬಳಿಕ ಲೋಕಲ್ ರೈಲುಗಳು ಮಾತ್ರ ನಿಲುಗಡೆಯಾಗುತ್ತಿದೆ. ಕೋಡಿಂಬಾಳ ರೈಲ್ವೇ ನಿಲ್ದಾಣ ಕಡಬಕ್ಕೆ ಸುಮಾರು ಎರಡು ಕಿ ಮೀ ಅಂತರವಿದ್ದು, ಈ ಭಾಗದ ಸುಮಾರು 27ಕ್ಕೂ ಗ್ರಾಮಗಳ ಸುಮಾರು 75 ಸಾವಿರ ಪ್ರಯಾಣ ಮಾಡುವ ಸಾರ್ವಜನಿಕರಿಗೆ ಅನುಕೂಲವಿಲ್ಲದೆ ರೈಲು ಇದ್ದು ಇಲ್ಲದಂತಾಗಿದೆ. ಅಲ್ಲದೆ ಮೂಲಭೂತ ಸೌಕರ್ಯಗಳಿಗೂ ಆಧ್ಯತೆ ನೀಡಬೇಕು” ಎಂದು ಆಗ್ರಹಿಸಿದರು.

ರೈಲು ತಡೆದರು

ಪ್ರತಿಭಟನಾಕಾರರು 2.30 ಸುಮಾರಿಗೆ ರೈಲ್ವೇ ನಿಲ್ದಾಣದಲ್ಲಿ ಜಮಾಯಿಸಿ ಘೋಷಣೆಗಳನ್ನು ಕೂಗುತ್ತಿದ್ದು, ಸುಮಾರು 4 ಗಂಟೆಗೆ ಆಗಮಿಸಿದ ಯಶವಂತಪುರ-ಕಾರವಾರ ರೈಲನ್ನು ಐದು ನಿಮಿಷಗಳ ಕಾಲ ತಡೆಹಿಡಿದು ಪ್ರತಿಭಟಿಸಲಾಯಿತು.

ಈ ಸಂದರ್ಭ ಮೈಸೂರು ವಿಭಾಗದ ಡಿವಿಜನಲ್ ಚೀಫ್ ಎಕ್ಸಿಗೀಟಿವ್  ಪ್ರ್ರಕಾಶ್  ಕಾಂಡ್ರಿ ಅವರಿಗೆ ಮನವಿ ನೀಡಿ ಬೇಡಿಕೆ ಈಡೇರಿಸುವಂತೆ ಆಗ್ರಹಿಸಲಾಯಿತು. ಮನವಿ ಸ್ವಿಕರಿಸಿ ಮಾತನಾಡಿದ ಪ್ರಕಾಶ್ ಕಾಂಡ್ರಿ,  “15 ದಿವಸದೊಳಗೆ ಶೌಚಾಲಯ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ವ್ಯವಸ್ಥೆಗೆ ಕ್ರಮಕೈಗೊಳ್ಳಲಾಗುವುದು. ಮೂರು ತಿಂಗಳೊಳಗೆ ರೈಲ್ವೇ ಪ್ಲಾಟ್ ಫಾರ್ಮ್ ಮೇಲ್ದಜೆಗೇರಿಸುವುದು ಮತ್ತು ಬೆಂಗಳೂರು-ಕಾರವಾರ ಹಗಲು ಮತ್ತು ರಾತ್ರಿ ಎಕ್ಸಪ್ರೆಸ್ ರೈಲು ನಿಲುಗಡೆಗೆ ಕ್ರಮಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.