ಗೋಣಿಕೊಪ್ಪದಲ್ಲಿ 26 ಟನ್ ವಿಯೇಟ್ನಾಂ ಕರಿಮೆಣಸು ವಶ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಡಿಕೇರಿ : ಗೋಣಿಕೊಪ್ಪದಲ್ಲಿರುವ ಎಪಿಎಂಸಿ ಯಾರ್ಡಿನಲ್ಲಿರುವ ರೋಸ್ ಮೇರಿ ಇಂಟರ್‍ನ್ಯಾಷನಲ್ ಮತ್ತು ಕಾವೇರಿ ಎಂಟರ್‍ಪ್ರೈಸಸ್ ಸಂಸ್ಥೆಗಳಿಗೆ ಸೇರಿದ ಗೋದಾಮಿಗೆ ದಾಳಿ ನಡೆಸಿದ ಪೊಲೀಸರು ಸುಮಾರು 26 ಟನ್ ವಿಯೆಟ್ನಾಂ ಕರಿಮೆಣಸು ವಶಪಡಿಸಿಕೊಂಡಿದ್ದಾರೆ.

ಸ್ಥಳೀಯ ಕರಿಮೆಣಸಿನೊಂದಿಗೆ ಈ ಆಮದು ಮಾಡಿದ ಕರಿಮೆಣಸುಗಳನ್ನು ಕಲಬೆರೆಕೆ ಮಾಡಿ ಈ ಎರಡು ಸಂಸ್ಥೆಗಳು ಅಕ್ರಮ ವ್ಯವಹಾರ ಮಾಡುತ್ತಾ ಕೋಟಿಗಟ್ಟಲೆ ರೂ ಅಕ್ರಮ ಆದಾಯ ಮಾಡುತ್ತಿವೆ ಎಂದು ಹೇಳಲಾಗಿದೆ.

ವಿಯೆಟ್ನಾಂ ಕರಿಮೆಣಸು ಮಾರುಕಟ್ಟೆಯಲ್ಲಿ ಕಿಲೋವೊಂದಕ್ಕೆ 225 ರೂ ದರವಿದ್ದರೆ, ಕೂರ್ಗ್ ಕರಿಮೆಣಸು  ಕಿಲೋವೊಂದಕ್ಕೆ 440 ರೂಪಾಪಯಗೆ ಮಾರಾಟವಾಗುತ್ತಿದೆ.

ಪೊಲೀಸರು ವಿಯೆಟ್ನಾಂ ಕರಿಮೆಣಸು ವಶಪಡಿಸಿಕೊಂಡಿದ್ದಾರೆ ಎನ್ನುವ ಸಂಗತಿ ಬೆಳಕಿಗೆ ಬರುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಗೋಣಿಕೊಪ್ಪ ಎಪಿಎಂಸಿ ಯಾರ್ಡ್ ಮುಂಭಾಗದಲ್ಲಿ ಭಾರೀ ಪ್ರತಿಭಟನೆ ನಡೆಸಿದರು. ವಿಯೆಟ್ನಾಂ ಕರಿಮೆಣಸನ್ನು ಕಡಿಮೆ ದರದಲ್ಲಿ ಮಾರಾಟ ಮಾಡುವುದಕ್ಕೆ ಎಪಿಎಂಸಿ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು.

ಕರಿಮೆಣಸಿನ ಪ್ರತಿ 25 ಕೇಜಿ ಬ್ಯಾಗುಗಳಿದ್ದು ಒಟ್ಟು 1045 ಬ್ಯಾಗ್ ವಶಪಡಿಸಿಕೊಳ್ಳಲಾಗಿದೆ. ಉತ್ತರ ಪ್ರದೇಶದ ಸಂಸ್ಥೆಯೊಂದರ ಹೆಸರು ಈ ಗೋಣಿಚೀಲಗಳಲ್ಲಿ ಕಂಡುಬಂದಿದೆ.