`ಮನೆ, ಉದ್ಯೋಗ ಎರಡೂ ಸಂಭಾಳಿಸುವಂತೆ ಮಹಿಳೆಯರಿಗೇ ಯಾಕೆ ಹೇಳಲಾಗುತ್ತದೆ’

ನಾಲ್ಕು ವರ್ಷಗಳ ಹಿಂದೆ ನಿರ್ಮಾಪಕ ಸಿದ್ದಾರ್ಥ್ ರಾಯ್ ಕಪೂರ್ ಮದುವೆಯಾಗಿದ್ದ ವಿದ್ಯಾ ಬಾಲನ್ ಈಗ ಮಹಿಳೆಯರ ಪರವಾಗಿ ಬ್ಯಾಟಿಂಗ್ ಮಾಡಿದ್ದಾಳೆ. ಮನೆ ಕೆಲಸದ ಜೊತೆಗೆ ಹೊರಗಿನ ಕೆಲಸ ಮಾಡುವ ಅವಶ್ಯಕತೆ ಕೇವಲ ಮಹಿಳೆಯರಿಗಷ್ಟೇ ಯಾಕೆ ಇರುತ್ತೆ ಎಂದು ಬೋಲ್ಡ್ ನಟಿ ವಿದ್ಯಾ ಬಾಲನ್ ನೇರವಾಗಿ ಪ್ರಶ್ನಿಸಿದ್ದಾಳೆ. ಮನೆ ಕೆಲಸ ಎಲ್ಲಾ ಮುಗಿಸಿ, ಆಮೇಲೆ ಉದ್ಯೋಗಕ್ಕೆ ಹೊರಡಬೇಕೆಂದರೆ ಮಹಿಳೆಯರಿಗೆ ಅದು ಹೇಗೆ ಸಾಧ್ಯವಾಗುತ್ತದೆ? ಆಕೆ ಮನೆ ಮತ್ತು ಆಫೀಸ್ ಎರಡರ ನಡುವೆ ಜಗ್ಗಾಟ ನಡೆಸಬೇಕಾಗುತ್ತದೆ ಅಷ್ಟೇ ಎನ್ನುವುದು ವಿದ್ಯಾ ನುಡಿ.
“ನನಗೆ ಆ ರೀತಿಯ ಒದ್ದಾಟ ಮಾಡಲು ಆಗುವುದಿಲ್ಲ. ಹಾಗೆ ಮಾಡಿ ನಾನು ಸೂಪರ್ ಮಹಿಳೆ ಆಗಬೇಕು ಎಂದು ಯಾವುದೇ ಕಾರಣಕ್ಕೂ ಅಂದುಕೊಂಡಿಲ್ಲ. ಶೂಟಿಂಗ್‍ನಲ್ಲಿರುವಾಗ ಶೂಟಿಂಗ್, ಮನೆಗೆ ಹೋದಾಗ ಮನೆ. ಚಿಲ್ ಮಾಡಬೇಕು ಎಂದೆನಿಸಿದಾಗ ಹಾಗೂ ಮಾಡುತ್ತೇನೆ. ಇನ್ನು ಕೆಲವು ಸಲ ಏನೂ ಮಾಡಲು ಮನಸ್ಸಿರುವುದಿಲ್ಲ. ಆಗ ಸುಮ್ಮನೇ ಕಾಲಕಳೆಯುತ್ತೇನೆ. ಮಹಿಳೆಯರಿಗೆ ಮನೆ ಮತ್ತು ಉದ್ಯೋಗ ಈ ಎರಡೂ ಕೆಲಸಗಳನ್ನು ನಿಭಾಯಿಸಿಕೊಂಡು ಹೋಗಬೇಕೆಂದು ಹೇಳುವುದು ನಿಜಕ್ಕೂ ಅನ್ಯಾಯ” ಎಂದಿದ್ದಾಳೆ ವಿದ್ಯಾ.
ಶೂಟಿಂಗ್ ಸಮಯದಲ್ಲಿ ಹೊರಗೆ ಹೋಗಬೇಕಾದಾಗ, ಅದೇ ಸಮಯದಲ್ಲಿ ಕುಟುಂಬದಲ್ಲಿ ಯಾವುದಾದರೂ ಮುಖ್ಯ ಸಮಾರಂಭ ಇದ್ದರೆ ಆ ಸಮಯದಲ್ಲಿ ಹಾಜರಿರದಿದ್ದರೆ ಅಪರಾಧಿ ಭಾವನೆ ಕಾಡುತ್ತದೆ. ಯಾಕೆಂದರೆ ನಾನು ಮಹಿಳೆ. ಅದೇ ಪುರುಷರಾದರೆ ಅವರು ಉದ್ಯೋಗಕ್ಕೆ ಹೋದರೆ ಯಾರಿಗೆ ಏನೂ ಅನಿಸುವುದಿಲ್ಲ ಎನ್ನುವುದು ವಿದ್ಯಾ ಬಿಚ್ಚುನುಡಿ.
ಇದಲ್ಲದೇ ವಿದ್ಯಾ `ನನಗೆ ಎಲ್ಲಿ ಹೋದರೂ ನಿನಗೆ ಮಕ್ಕಳಾಗುವುದು ಯಾವಾಗ ಎಂದು ಕೇಳುತ್ತಾರೆ. ಅದೇ ವಿವಾಹಿತ ಪುರುಷರಿಗೆ ಆ ಬಗ್ಗೆ ಏನೂ ಕೇಳುವುದಿಲ್ಲ.’ ಈ ತಾರತಮ್ಯವೇಕೆ ಎನ್ನುವ ಪ್ರಶ್ನೆ ವಿದ್ಯಾಳದ್ದು. ಜೊತೆಗೇ ತಮ್ಮ ಇಂಡಸ್ಟ್ರಿಯ ಸಮೇತ ಎಲ್ಲಾ ಕಡೆ ಪರುಷರಿಗೇ ಹೆಚ್ಚು ಸಂಭಾವನೆ ನೀಡುವ ಬಗ್ಗೆಯೂ ಆಕ್ಷೇಪವೆತ್ತಿದ್ದಾಳೆ ವಿದ್ಯಾ. ಜೊತೆಗೇ ಶೂಟಿಂಗ್ ಸಮಯದಲ್ಲಿ ಹೀರೋಗಿಂತಲೂ ತನಗೇ ಪ್ರಮುಖ ರೋಲ್ ಇದ್ದರೂ ಹೀರೋ ಸಮಯಕ್ಕೇ ತಾವು ಅಡ್ಜೆಸ್ಟ್ ಆಗಬೇಕು ಎನ್ನುವ ನಿರ್ದೇಶಕರ ಮಾನಸಿಕ ನಿಲುವಿನ ಬಗ್ಗೆಯೂ ಧ್ವನಿಯೆತ್ತಿದ್ದಾಳೆ ವಿದ್ಯಾ.