ವಿಧಾನ ಸೌಧ ವಜ್ರ ಮಹೋತ್ಸವ ಆಚರಣೆಗೆ ಸಿದ್ಧತೆ : ಸಭಾಪತಿ ನಿರ್ಧಾರಕ್ಕೆ ಸಚಿವರ ಗುಂಪು ಅಸಮಾಧಾನ

ಬೆಂಗಳೂರು : 60 ವರ್ಷದ ಇತಿಹಾಸ ಕಂಡ ವಿಧಾನ ಸೌಧದ ವಜ್ರ ಮಹೋತ್ಸವ ಆಚರಿಸಲು ಸ್ಪೀಕರ್ ಕೋಳಿವಾಡ ಮತ್ತು ವಿಧಾನ ಪರಿಷತ್ತು ಅಧ್ಯಕ್ಷ ಶಂಕರಮೂರ್ತಿ ತೆಗೆದುಕೊಂಡಿರುವ `ಏಕಪಕ್ಷೀಯ ನಿರ್ಧಾರ’ಕ್ಕೆ ಸಿದ್ದರಾಮಯ್ಯ ಸಂಪುಟದ ಸಚಿವರ ಬಣವೊಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ವಿಧಾನ ಸೌಧದ ಜೀರ್ಣೋದ್ಧಾರ ಮತ್ತು ವಜ್ರ ಮಹೋತ್ಸವ ಆಚರಣೆಯು 26 ಲಕ್ಷ ರೂ ವೆಚ್ಚದಲ್ಲಿ ನಡೆಯಲಿದ್ದು, ಸರ್ಕಾರಕ್ಕೆ ತಿಳಿಸದೆಯೇ ಎರಡೂ ಸದನಗಳ ಅಧ್ಯಕ್ಷರು ಈ ಕೆಲಸದಲ್ಲಿ ಮುಂದುವರಿದಿದ್ದಾರೆ ಎಂಬ ಆಕ್ಷೇಪದ ಮಾತುಗಳು ಕೇಳಿ ಬಂದಿವೆ.

ಕಳೆದ ವಾರ ದಿಲ್ಲಿಗೆ ಭೇಟಿ ನೀಡಿದ ಶಂಕರಮೂರ್ತಿ ಮತ್ತು ಕೋಳಿವಾಡ ಅಕ್ಟೋಬರ್ 25ರಂದು ರಾಜ್ಯ ಶಾಸಕಾಂಗದ ವಿಶೇಷ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುವಂತೆ ರಾಷ್ಟ್ರಪತಿ ರಾಮನಾಥ ಕೋವಿಂದರಿಗೆ ಆಹ್ವಾನ ನೀಡಿದ್ದರು. ವಜ್ರ ಮಹೋತ್ಸವದಲ್ಲಿ ಒಳಗೊಳ್ಳಲಿರುವ ಸಾಂಸ್ಕøತಿಕ ಸಹಿತ ಇತರ ಕಾರ್ಯಕ್ರಮಗಳ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ.

ಆದರೆ ಇದುವರೆಗೂ ರಾಜ್ಯ ಸಂಪುಟ ಈ ಪ್ರಸ್ತಾವ ಪರಿಗಣಿಸಿಲ್ಲ ಎಂದು ಸರ್ಕಾರಿ ಮೂಲಗಳು ಹೇಳಿವೆ. ಈ ಆಚರಣೆ ಬಗ್ಗೆ ರಾಜ್ಯ ಸಚಿವ ಸಂಪುಟ ಅಥವಾ ಸರ್ಕಾರಕ್ಕೆ ಮಾಹಿತಿಯೇ ನೀಡಿಲ್ಲ ಎಂದು ಸಚಿವರ ಗುಂಪೊಂದು ಹೇಳಿದೆ.

ಕೋವಿಂದರು ಸದನವನ್ನುದ್ದೇಶಿಸಿ ಭಾಷಣ ಮಾಡುವ ವಿಷಯದಲ್ಲಿ ರಾಜ್ಯ ಸಂಪುಟಕ್ಕೆ ಇದುವರೆಗೂ ಶಾಸಕಾಂಗ ಸಭೆಯ ಅಧ್ಯಕ್ಷರು ಮಾಹಿತಿ ನೀಡಿಲ್ಲ. ಆದಾಗ್ಯೂ ಇದು ನಿಗದಿತ ಪಟ್ಟಿಯಂತೆ ನಡೆಯಲಿದೆ ಎಂದು ಕಾನೂನು ಸಚಿವ ಜಯಚಂದ್ರ ತಿಳಿಸಿದರು.