ಮರಳು ಲಾರಿಯಿಂದ ಪೊಲೀಸರ ಲಂಚ ಸ್ವೀಕಾರ ವಿಡಿಯೋ ವೈರಲ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಪರ್ಮಿಟ್ ತೋರಿಸಿದರೂ ಕ್ಯಾರೇ ಅನ್ನದ ಪೊಲೀಸರು ಅಕ್ರಮ ಮರಳು ಸಾಗಾಟ ಮಾಡುತ್ತಿದ್ದಾರೆ ಎಂದು ಬೆದರಿಕೆ ಹಾಕಿದ್ದಲ್ಲದೇ ಚಾಲಕನಿಂದ ದುಡ್ಡು ವಸೂಲಿ ಮಾಡಿ ದಾದಾಗಿರಿ ನಡೆಸಿದ ಘಟನೆ ಉಳ್ಳಾಲದಲ್ಲಿ ನಡೆದಿದೆ. ಈ ದೃಶ್ಯಾವಳಿಗಳನ್ನು ವ್ಯಕ್ತಿಯೊಬ್ಬ ಸೆರೆ ಹಿಡಿದಿದ್ದು, ಅದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ಈ ರೀತಿ ದುಡ್ಡು ಪೀಕಿಸಿದ್ದು ಉಳ್ಳಾಲದ ಇಬ್ಬರು ಪೊಲೀಸರು. ಈ ಘಟನೆ ನಡೆದಿರೋದು ತೊಕ್ಕೊಟ್ಟು ಚೆಂಬುಗುಡ್ಡೆ ಸಮೀಪದಲ್ಲಿ.

ಕಲ್ಲಾಪುವಿನಿಂದ ಕೊಣಾಜೆ ಕಡೆಗೆ ಮರಳು ಸಾಗಾಟದ ಲಾರಿಯೊಂದು ಸಂಚಾರ ನಡೆಸುತ್ತಿತ್ತು. ಪಿಸಿಆರ್ ವಾಹನ ಸರಿಯಿಲ್ಲದ ಕಾರಣದಿಂದ ಠಾಣೆಯ ಅಂಬುಲೆನ್ಸ್ ವಾಹನದಲ್ಲಿ ಪಿಸಿಆರ್ ಕರ್ತವ್ಯದಲ್ಲಿ ಉಳ್ಳಾಲ ಠಾಣೆಯ ಇಬ್ಬರು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರು. ಚೆಂಬುಗುಡ್ಡೆ ಸಮೀಪದ ಕ್ಯಾಂಟೀನ್ ಎದುರುಗಡೆ ಲಾರಿಯನ್ನು ಕಂಡು ತಡೆದ ಪೊಲೀಸರು ಲಾರಿ ಚಾಲಕನಲ್ಲಿ ದಾಖಲೆ ತೋರಿಸುವಂತೆ ಕೇಳಿದ್ದು, ಚಾಲಕ ತಾತ್ಕಾಲಿಕವಾಗಿ ಪಡೆದ ಮರಳು ಪರ್ಮಿಟನ್ನು ತೋರಿಸಿದರೂ ಕೇಳದ ಈ ಇಬ್ಬರು ಅದು ಸಾಕಾಗೋಲ್ಲ ಎಂದು ದುಡ್ಡಿಗೆ ಬೇಡಿಕೆ ಇಟ್ಟಿದ್ದಾರೆ. ಕೊನೆಗೆ ಉಪಾಯವಿಲ್ಲದೆ ಚಾಲಕ ರೂ 100 ಕೊಟ್ಟು ಕೈ ತೊಳೆದುಕೊಂಡಿದ್ದಾನೆ.

ಇಷ್ಟೇ ಅಲ್ಲ, ಮತ್ತೊಮ್ಮೆ ಈ ಮಾರ್ಗವಾಗಿ ಮರಳು ಸಾಗಾಟ ಮಾಡಿದರೆ ಇನ್ನು ಪ್ರತೀ ಲಾರಿಗೆ ಹೆಚ್ಚುವರಿಯಾಗಿ 100 ರೂ ನೀಡಲೇಬೇಕು ಎಂದೂ ಈ ಪೇದೆಗಳು ತಾಕೀತು ಮಾಡಿದ್ದಾರೆನ್ನಲಾಗಿದೆ.

ಪೊಲೀಸರ ತಲೆನೋವು ಬೇಡ ಎಂದ ಲಾರಿ ಚಾಲಕ ಕೊನೆಗೆ 200 ರೂ ಕೊಟ್ಟು ತೊಲಗಿತು ಪೀಡೆ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಲಂಚ ಸ್ವೀಕರಿಸುವ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಹರಿದಾಡುತ್ತಿದೆ.