ವಂಚನೆ ಎಸಗಿದ ಮಹಿಳೆಯಿಂದ ಹಣ ವಾಪಸ್ ಕೊಡಿಸಲು ಮನವಿ

ನಮ್ಮ ಪ್ರತಿನಿಧಿ ವರದಿ

ಕಾರವಾರ : ಸರ್ಕಾರಿ ನೌಕರಿ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ಮುಂಡಗೋಡಿನ ವಾಣಿ ಪ್ರಭು ಅವರಿಂದ ವಾಪಸ್ ಹಣ ಕೊಡಿಸುವಂತೆ ಇಲ್ಲಿನ ಗುನಗಿವಾಡಾ ನಿವಾಸಿ ಸ್ವಪ್ನಿಲ್ ಪೆಡ್ನೇಕರ ಜಿಲ್ಲಾಡಳಿತಕ್ಕೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮಂಗಳವಾರ ಮನವಿ ನೀಡಿದರು.

ಕೆಲವು ದಿನದ ಹಿಂದೆ ರದ್ದಾದ ನೋಟನ್ನು ಗೋವಾದಿಂದ ಮುಂಡಗೋಡಿಗೆ ಸಾಗಿಸುತ್ತಿದ್ದಾಗ ಮಾಜಾಳಿ ಚೆಕ್ಪೋಸ್ಟಿನಲ್ಲಿ ಸಿಕ್ಕಿಬಿದ್ದ ಆರೋಪಿಗಳಲ್ಲಿ ಪ್ರಮುಖಳಾದ ವಾಣಿ ಅವರು, 2013ರಲ್ಲಿ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಹೇಳಿ ಸುಮಾರು 1.36 ಕೋಟಿ ರೂ ವಂಚಿಸಿದ್ದರು. ಸರ್ಕಾರದ ಉನ್ನತ ಹುದ್ದೆಯಲ್ಲಿ ಇರುವ ಅಧಿಕಾರಿಗಳು, ಮಂತ್ರಿಗಳು ಪರಿಚಯವಿದೆ. ಅವರ ಮೂಲಕ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದರು. 49 ಮಂದಿ ಉದ್ಯೋಗದ ಆಸೆಯಿಂದ ಹಣವನ್ನು ನೀಡಿದ್ದರು.

ಇದಾಗಿ ತಿಂಗಳು ಉರುಳಿದರೂ ನೌಕರಿ ಬಗ್ಗೆ ಯಾವ ಆದೇಶ ಪತ್ರವೂ ಬರದಿದ್ದಾಗ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, “ಕೆಲಸ ಕೊಡಿಸಲು ಎಲ್ಲಾ ರೀತಿಯಿಂದ ಪ್ರಯತ್ನ ಮಾಡಿದ್ದೇನೆ. ಸರ್ಕಾರದ ಮಟ್ಟದಲ್ಲಿ ಮಾತನಾಡಿದ್ದೇನೆ. ಕೆಲವೇ ದಿನದಲ್ಲಿ ನಿಮಗೆ ಸರ್ಕಾರದಿಂದ ಆದೇಶ ಪತ್ರ ಬರುತ್ತದೆ” ಎಂದು ಸುಳ್ಳು ಹೇಳಿಕೊಂಡೇ ದಿನ ತಳ್ಳಿದ್ದಾರೆಯೇ ಹೊರತು ನೌಕರಿ ದೊರೆಯಲಿಲ್ಲ. ವಾಪಸ್ ಹಣ ನೀಡುವಂತೆ ಕೇಳಿದರೆ ಏನು ಬೇಕಾದರೂ ಮಾಡಿಕೊಳ್ಳಿ ಎಂದು ಧಮಕಿ ಹಾಕಿದ್ದರು. ನಂತರ ಅವರು ಸಂಪರ್ಕಕ್ಕೆ ಸಿಗದಿದ್ದಾಗ ಈ ಬಗ್ಗೆ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಆದರೆ ಇದುವರೆಗೂ ಕ್ರಮವಾಗಿರಲಿಲ್ಲ. ರದ್ದಾದ ನೋಟು ಸಾಗಾಣಿಕಾ ವೇಳೆ ಸಿಕ್ಕಿಬಿದ್ದ ಅವರಿಂದ ವಾಪಸ್ ಹಣ ಕೊಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

LEAVE A REPLY