ಚರ್ಚಿನಲ್ಲಿ ಗಿಟಾರ್ ಬಾರಿಸಿದ ಹಿಂದೂ ಯುವಕ-ಯುವತಿ ವಿವಾಹಕ್ಕೆ ವಿಹಿಂಪ ತಡೆ

ಬೋಪಾಲ್ : ವಿಶ್ವ ಹಿಂದು ಪರಿಷತ್ತು ಯಾವತ್ತೂ ಅಂತರ್-ಧರ್ಮೀಯ ವಿವಾಹಕ್ಕೆ ಬೆಂಬಲ ನೀಡುವುದಿಲ್ಲ. ಇದಕ್ಕೆ ಮತ್ತೊಂದು ನಿದರ್ಶನ ಇಲ್ಲಿದೆ. ಆದರೆ ಈ ಬಾರಿ ಇಬ್ಬರೂ ಹಿಂದೂಗಳಾಗಿರುವ ವಿವಾಹಕ್ಕೆ ವಿಹಿಂಪ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿರುವುದು ವಿಶೇಷವಾಗಿದೆ !

ಹಿಂದೂಗಳಾಗಿದ್ದ 28 ವರ್ಷದ ವಿಶಾಲ್ ಮಿತ್ರ ಮತ್ತು 27 ವರ್ಷದ ರೀತೂ ದುಬೆ, ಮಾನಸಿಕವಾಗಿ ಕ್ರಿಶ್ಚಿಯನ್ ಜಾತಿಗೆ ಸೇರಿಕೊಂಡಿದ್ದಾರೆ ಎನ್ನುವುದು ವಿಹಿಂಪ ಆರೋಪ. 2013ರಲ್ಲಿ ವಿಶಾಲ್ ಬೋಪಾಲದ ಚರ್ಚೊಂದರಲ್ಲಿ ಗಿಟಾರ್ ಬಾರಿಸಿದ್ದ. ಬಳಿಕ ಈತ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ್ದ ಎಂದು ವಹಿಂ ನಂಬಿದೆ.  ಈತನನ್ನು ಭೇಟಿಯಾದ ಬಳಿಕ ರೀತೂ ಹಣೆಗೆ ಬಿಂದಿ ಹಾಗೂ ಹಿಂದೂ ದೇವರ ಪ್ರಾರ್ಥನೆ ನಿರಾಕರಿಸುತ್ತ ಬಂದಿದ್ದಳು. ಅಂದರೆ, ಅವರಿಬ್ಬರೂ ಮಾನಸಿಕವಾಗಿ ಮತಾಂತರವಾಗಿದ್ದಾರೆ ಎನ್ನುವುದು ವಿಹಿಂಪ ತರ್ಕ.

ಬೋಪಾಲದ ಬಿಲ್ಡಿಂಗ್ ಕಂಪೆನಿಯೊಂದರಲ್ಲಿ ಮ್ಯಾನೇಜರಾಗಿ ಕೆಲಸ ಮಾಡುತ್ತಿದ್ದ ವಿಶಾಲ್ ಮತ್ತು ಬ್ಯಾಂಕ್ ಸಿಬ್ಬಂದಿಯಾಗಿರುವ ರೀತೂ ಮಂಗಳವಾರದಂದು ವಿಶೇಷ ವಿವಾಹ ಕಾಯ್ದೆಯಂತೆ ತಮ್ಮ ವಿವಾಹ ನೋಂದಾವಣೆ ಮಾಡಿಕೊಳ್ಳಲಿದ್ದರು. ಈ ಘಟನೆ ಬಗ್ಗೆ ಸುದ್ದಿ ತಿಳಿದ ವಿಹಿಂಪ ಕಾರ್ಯಕರ್ತರು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟರರ ಕಚೇರಿ ಹೊರಗಡೆ ಭಾರೀ ಪ್ರತಿಭಟನೆ ನಡೆಸಿದರು.

ವಿಶಾಲ್ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿಲ್ಲ ಎಂದು ರೀತೂ ತಾಯಿ ಹೇಳಿದರೂ, ಮತಾಂತರಗೊಂಡಿದ್ದಾನೆ  ಎಂದು ಹೇಳುತ್ತಿರುವ ಈ ಪ್ರಕರಣ ತನಿಖೆಯಾಗಲಿ ಎಂದು ವಿಹಿಂಪ ನಾಯಕ ದೇವೇಂದ್ರ ರಾವತ್ ಆಗ್ರಹಿಸಿದರು.