ಹಿರಿಯ ಸಾಹಿತಿ ಜೋಶಿ ನಿಧನ

ಅಂಕೋಲಾ : ಹಿರಿಯ ಸಾಹಿತಿ, ನಿವೃತ್ತ ಪ್ರಾಚಾರ್ಯ ವಿ ಎ ಜೋಶಿ ಅವರು ಬುಧವಾರ ಬೆಳಗಿನ ಜಾವ ಧಾರವಾಡದ ಎಸ್ಡಿಎಂನಲ್ಲಿ ನಿಧನರಾದರು.

ದಿನಕರ ದೇಸಾಯಿ ಅವರ ಕೆನರಾ ವೆಲ್ಫೇರ್ ಟ್ರಸ್ಟಿನ ಅಂಕೋಲಾದ ಜಿ ಸಿ ಕಾಲೇಜಿನ ಕನ್ನಡ ಉಪನ್ಯಾಸಕರಾಗಿ ವಿದ್ಯಾರ್ಥಿಗಳ ಮನಗೆದ್ದಿದ್ದ ಅವರು ಮುಂದೆ ಪ್ರಾಚಾರ್ಯರಾಗಿ ನಿವೃತ್ತರಾಗಿದ್ದರು. ನಿವೃತ್ತಿ ನಂತರದಲ್ಲಿ ಅವರು ಧಾರವಾಡದಲ್ಲಿ ನೆಲೆಸಿದ್ದರು. ಉತ್ತಮ ವಾಗ್ಮಿಗಳು, ಹಾಸ್ಯ ಪ್ರಜ್ಞೆಯುಳ್ಳವರೂ ಆಗಿದ್ದ ಜೋಶಿ ಅವರು ನಾಡಿನ ವಿವಿಧ ಪತ್ರಿಕೆಗಳಲ್ಲಿ ಹಾಸ್ಯ ಲೇಖನಗಳನ್ನು, ಪ್ರಬಂಧಗಳನ್ನು ಬರೆದಿದ್ದಾರೆ. ರಾಜ್ಯಮಟ್ಟದ ಪತ್ರಿಕೆಯೊಂದರ ಅಂಕಣಕಾರರೂ ಆಗಿದ್ದರು. ವಿ ಎ ಜೋಶಿಯವರು ಮಕ್ಕಳಿಗಾಗಿ ಕಿರಿಯರ ಗಾಂಧಿ, ಕಿರಿಯರ ನೆಹರು, ಬಾಬಾ ಆಮ್ಚೆ ಮುಂತಾದ ಕೃತಿಗಳನ್ನು ರಚಿಸಿದ್ದರು. 7 ಕೃತಿಗಳನ್ನು ಅವರು ಪ್ರಕಟಿಸಿದ್ದಾರೆ.