ಕುಮಾರಧಾರಾ ನದಿಗೆ ಕಿಂಡಿ ಅಣೆಕಟ್ಟು

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಹಿರೇಬಂಡಾಡಿಯಲ್ಲಿ ಕುಮಾರಧಾರಾ ನದಿಯಲ್ಲಿ ಕೃಷಿ ಉಪಯೋಗಕ್ಕೆ ಅನುಕೂಲ ಆಗುವ ನಿಟ್ಟಿನಲ್ಲಿ 20 ಕೋಟಿ ರೂಪಾಯಿ ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸುವ ಬಗ್ಗೆ ಯೋಜನೆ ಹಾಕಿಕೊಂಡಿದ್ದು, ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಂಸದೀಯ ಕಾರ್ಯದರ್ಶಿ, ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.

ಅವರು ಹಿರೇಬಂಡಾಡಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಮತ್ತು ಮನೆ ಮನೆ ಕಾಂಗ್ರೆಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಿರೇಬಂಡಾಡಿ ಮತ್ತು ಬೆಳ್ಳಿಪ್ಪಾಡಿ ಮಧ್ಯೆ ಕುಮಾರಧಾರ ನದಿಯಲ್ಲಿ ಹಿರೇಬಂಡಾಡಿ ಗ್ರಾಮದ ಗಡಿಮನೆ ಮತ್ತು ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರ ಎಂಬಲ್ಲಿ ಯೋಜನೆ ಅನುಷ್ಠಾನ ಆಗಲಿದ್ದು, ಈಗಾಗಲೇ ಅಂದಾಜು ಪಟ್ಟಿ ಸಿದ್ಧಪಡಿಸಿ, ಸಣ್ಣ ನೀರಾವರಿ ಇಲಾಖೆ ಮುಂದೆ ಇದ್ದು, ಮಂಜೂರಾತಿ ಆಗುವ ಅಂತಿಮ ಹಂತದಲ್ಲಿ ಇದೆ ಎಂದು ಹೇಳಿದರು.

ಇಲ್ಲಿ ಆಗುವ ಕಿಂಡಿ ಅಣೆಕಟ್ಟು ಮೂಲಕ ಅಂತರ್ಜಲ ವೃದ್ಧಿ ಆಗಲಿದೆ, ಇದರಿಂದ ಹಿರೇಬಂಡಾಡಿ, ಕೊೈಲ, ರಾಮಕುಂಜ, ಆಲಂಕಾರು, ಬೆಳ್ಳಿಪ್ಪಾಡಿ, ಕೋಡಿಂಬಾಡಿ, ಶಾಂತಿಗೋಡು, ಚಾರ್ವಕ ಪ್ರದೇಶ ತನಕದ ಕೃಷಿಕರಿಗೆ ನೀರಿನ ವ್ಯವಸ್ಥೆ ಆಗಲಿದೆ ಎಂದರು.

ಕಿಂಡಿ ಅಣೆಕಟ್ಟು ಮೂಲಕ ಕೃಷಿಗೆ ನೀರಾವರಿ ವ್ಯವಸ್ಥೆ ಆಗುವುದರೊಂದಿಗೆ ಕಿಂಡಿ ಅಣೆಕಟ್ಟು ಮೇಲೆ ಸೇತುವೆಯ ವ್ಯವಸ್ಥೆಯೂ ಇದ್ದು, ಇದು ಹಿರೇಬಂಡಾಡಿ ಮತ್ತು ಬೆಳ್ಳಿಪ್ಪಾಡಿ ಸೇತು ಬಂಧು ಆಗಲಿದೆ ಇದು ಈ ರೀತಿಯೂ ಉಪಯೋಗ ಆಗಲಿದೆ ಎಂದು ಅವರು ಹೇಳಿದರು.