ರಸ್ತೆಯಲ್ಲಿ ಮೀನಿನ ನೀರನ್ನು ಚೆಲ್ಲುತ್ತಿದ್ದ ವಾಹನಗಳಿಗೆ ದಂಡ

ಎರ್ಮಾಳು ಸೇತುವೆ ಬಳಿ ಮೀನಿನ ನೀರು ಚೆಲ್ಲುತ್ತಿರುವುದು

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ರಾಷ್ಟ್ರೀಯ ಹೆದ್ದಾರಿ 66ರ ಎರ್ಮಾಳು ಸೇತುವೆ ಬಳಿ ಮೀನಿನ ನೀರನ್ನು ಕಾನೂನು ಬಾಹಿರವಾಗಿ ಚೆಲ್ಲುತ್ತಿದ್ದ ವಾಹನಗಳನ್ನು ಹಿಡಿದ ಪೊಲೀಸರು ಅವರಿಂದ ದಂಡ ಪಡೆದು ಎಚ್ಚರಿಕೆ ನೀಡಿ ಬಿಟ್ಟಿದ್ದಾರೆ.

ತೆಂಕ ಎರ್ಮಾಳು ಗ್ರಾ ಪಂ ವ್ಯಾಪ್ತಿಯ ಸೇತುವೆ ಸಮೀಪ ನಿರಂತರವಾಗಿ ಮೀನಿನ ವಾಹನಗಳು ಮೀನಿನ ನೀರನ್ನು ಬಿಡುತ್ತಿದ್ದು, ಇಡೀ ಪ್ರದೇಶ ದುರ್ನಾತ ಬೀರುವಂತಾಗಿದೆ. ತೆಂಕ ಗ್ರಾ ಪಂ ಆ ಭಾಗದಲ್ಲಿ ಹಾಕಲಾದ ಎಚ್ಚರಿಕೆಯ ನಾಮಫಲಕವನ್ನು ನಿರ್ಲಕ್ಷಿಸುವ ವಾಹನ ಚಾಲಕರು ಅದರ ಬುಡದಲ್ಲೇ ಮೀನಿನ ನೀರನ್ನು ಚೆಲ್ಲಿ ಗ್ರಾ ಪಂ.ಗೆ ಸಡ್ಡು ಹೊಡೆಯುತ್ತಿದ್ದಾರೆ. ಬಹಳಷ್ಟು ನೀರು ಚೆಲ್ಲುತ್ತಿದ್ದ ವಾಹನಗಳನ್ನು ಸಾರ್ವಜನಿಕರೇ ಹಿಡಿದು ಗ್ರಾ ಪಂ ಸಹಿತ ಪೊಲೀಸರಿಗೆ ಒಪ್ಪಿಸುತ್ತಿದ್ದು, ಇಂಥ ವಾಹನಗಳ ಆರ್ಭಟ ಕುಗ್ಗಬೇಕಿದ್ದರೆ ದೊಡ್ಡ ಮೊತ್ತದ ದಂಡ ವಸೂಲಿ ಮಾಡಿದರೆ ಮಾತ್ರ ಇದನ್ನು ನಿಯಂತ್ರಿಸಬಹುದು ಹೊರತಾಗಿ ಜುಜುಬಿ ಮೊತ್ತ ದಂಡವಾಗಿ ಸ್ವೀಕರಿಸಿದರೆ ಇದನ್ನು ನಿಯಂತ್ರಿಸಲು ಅಸಾಧ್ಯ ಎಂಬುದು ಸಾರ್ವಜನಿಕರ ಮಾತು.