ಸರಣಿ ಅಪಘಾತದಲ್ಲಿ ವಾಹನಗಳು ಜಖಂ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66 ಕೊಲ್ನಾಡು ಬಳಿ ಸರಣಿ ಅಪಘಾತ ನಡೆದಿದ್ದು, ಕಾರಿನಲ್ಲಿದ್ದ ಚಾಲಕ ಪವಾಡಸದೃಶ ಪಾರಾಗಿದ್ದಾರೆ.

ಪಾವಂಜೆಯಿಂದ ಮುಲ್ಕಿ ಕಡೆಗೆ ಹೋಗುತ್ತಿದ್ದ ಕಾರು ಚಾಲಕ ಕೊಲ್ನಾಡು ಜಂಕ್ಷನ್ ಬಳಿ ಉಡುಪಿ ಕಡೆಗೆ ಹೋಗುತ್ತಿದ್ದ ಈಚರ್ ಲಾರಿಯೊಂದಕ್ಕೆ ಅಪಘಾತವಾಗುವುದನ್ನು ತಪ್ಪಿಸಲು ತೀರಾ ಎಡಬದಿಗೆ ತಿರುಗಿಸಿದಾಗ ನಿಯಂತ್ರಣ ತಪ್ಪಿ ಕೊಲ್ನಾಡು ಬಸ್ ನಿಲ್ದಾಣ ಬಳಿಯಲ್ಲಿ ಪಾರ್ಕಿಂಗ್ ಮಾಡಿದ್ದ ಕಾರು ಹಾಗೂ ಸ್ಕೂಟರಿಗೆ ಡಿಕ್ಕಿ ಹೊಡೆದು ಮುಂದಕ್ಕೆ ನಿಂತಿದೆ.

ಅಪಘಾತದ ರಭಸಕ್ಕೆ ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ ಕಾರಿನ ಹಿಂಭಾಗಕ್ಕೆ ಹಾನಿಯಾಗಿದೆ. ಸ್ಕೂಟರ್ ನಜ್ಜುಗುಜ್ಜಾಗಿದೆ. ಸ್ಕೂಟರ್ ಸವಾರ ಮುಕ್ಕ ನಿವಾಸಿ ಮೊಹಮದ್ ಇಕ್ಬಾಲ್ ಸ್ಕೂಟರನ್ನು ಕೊಲ್ನಾಡು ಬಸು ನಿಲ್ದಾಣದ ಬಳಿ ಇಟ್ಟು ಮಂಗಳೂರಿಗೆ ತರಳಿದ್ದರೆನ್ನಲಾಗಿದೆ. ಯಾವಾಗಲೂ ಉಡುಪಿ ದಿಕ್ಕಿನ ಕೊಲ್ನಾಡು ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್ಸಿಗಾಗಿ ಕಾಯುತ್ತಿದ್ದು, ನಿಲ್ದಾಣದಲ್ಲಿ ಯಾರೂ ಇಲ್ಲದ ಕಾರಣ ಭಾರೀ ಅವಘಡ ತಪ್ಪಿದೆ. ಸುರತ್ಕಲ್ ಟ್ರಾಫಿಕ್ ಪೊಲೀಸರು ಕಾರಿನ ಚಾಲಕ ನಿಡ್ಡೋಡಿ ನಿವಾಸಿ ಸುರೇಶ್ ವಿರುದ್ಧ ಕೇಸು ದಾಖಲಿಸಿದ್ದಾರೆ.