ಎರ್ಮಾಳು ಸೇತುವೆ ಸಮೀಪ ಮೀನಿನ ತ್ಯಾಜ್ಯ ನೀರು ಚೆಲ್ಲಿದ ವಾಹನಕ್ಕೆ ದಂಡ

ಮೀನಿನ ವಾಹನ ಚಾಲಕನನ್ನು ತರಾಟೆಗೆ ತೆಗೆದುಕೊಂಡ ಕ್ಷಣ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಗ್ರಾಮ ಪಂಚಾಯಿತಿಯ ಸೂಚನಾ ಫಲಕವನ್ನು ಲೆಕ್ಕಿಸದೆ ಎರ್ಮಾಳು ತೆಂಕ ಸೇತುವೆ ಸಮೀಪ ಮೀನಿನ ತ್ಯಾಜ್ಯ ನೀರನ್ನು ಚೆಲ್ಲಿದ್ದ ವಾಹನಕ್ಕೆ ತೆಂಕ ಗ್ರಾ ಪಂ ಎರಡು ಸಾವಿರ ರೂಪಾಯಿ ದಂಡ ವಿಧಿಸಿದೆ.

ಕೇರಳ ನೋಂದಣಿ ಸಂಖ್ಯೆಯ ವಾಹನ ಗಂಗೊಳ್ಳಿಯಿಂದ ಮೀನು ಹೇರಿಕೊಂಡು ಬಂದು ಸೇತುವೆಯ ಕೆಳಭಾಗಕ್ಕೆ ವಾಹನವನ್ನು ಇಳಿಸಿ ನೀರು ಚೆಲ್ಲುತ್ತಿದ್ದನ್ನು ಕಂಡ ಸಾರ್ವಜನಿಕರು ಅವರ ಕೃತ್ಯವನ್ನು ತಡೆದು ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಹಾಗೂ ಸಿಬ್ಬಂದಿ, ಗ್ರಾ ಪಂ ಸೂಚನೆಯನ್ನು ದಿಕ್ಕರಿಸಿದ ಮೀನಿನ ವಾಹನದ ಚಾಲಕನಲ್ಲಿ ದಂಡ ಕಟ್ಟುವಂತೆ ಇಲ್ಲ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ತಿಳಿಸಿದಾಗ, ಚಾಲಕ ಗಂಗೊಳ್ಳಿಯ ಮಾಲಕಗೆ ದೂರವಾಣಿ ಕರೆ ಮಾಡಿ ಸಾರ್ವಜನಿಕರಿಗೆ ನೀಡಿದ್ದು, ಮಾಲಕ ಉಢಾಫೆಯಾಗಿ ಮಾತಾಡಿದಾಗ ಆಕ್ರೋಶಗೊಂಡ ಸಾರ್ವಜನಿಕರು, ಆತ ಸ್ಥಳಕ್ಕೆ ಬರುವ ತನಕ ವಾಹನ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಬಳಿಕ ಚಾಲಕನ ಮನವಿಯ ಮೇರೆಗೆ ಸಾರ್ವಜನಿಕರ ಮನವೊಲಿಸಿದ ಗ್ರಾ ಪಂ ಚಾಲಕನಿಂದ ದಂಡ ಪಡೆದು ಎಚ್ಚರಿಕೆ ನೀಡಿ ಬಿಡಲಾಯಿತು.