ಸಸ್ಯಾಹಾರ ಮಾತ್ರ ನಿಯಮ ಜಾರಿಯಿಂದ ಮಾಂಸಾಹಾರಿ ಹೋಟೆಲುಗಳಿಗೆ ಸಂಕಟ

ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕ

ಹಾಸನ : ಶ್ರವಣಬೆಳಗೊಳದ ಬಾಹುಬಲಿಗೆ ನಡೆಯಲಿರುವ ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಅಲ್ಲಿನ ಗ್ರಾಮ ಪಂಚಾಯತ್ ಎಲ್ಲಾ  ಮಾಂಸಾಹಾರಿ ಹೋಟೆಲುಗಳನ್ನು ಫೆಬ್ರವರಿ ತಿಂಗಳಲ್ಲಿ ಮುಚ್ಚಲು ಆದೇಶ ನೀಡಿದ ಹಿನ್ನೆಲೆಯಲ್ಲಿ ಅಲ್ಲಿನ ಹಲವಾರು ಮಾಂಸಾಹಾರಿ ಹೋಟೆಲುಗಳು  ಸಸ್ಯಾಹಾರಿ ಊಟ ಲಭ್ಯ ಎನ್ನುವ ಬೋರ್ಡುಗಳನ್ನು ಹಾಕಿ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಲು ಪ್ರಯತ್ನಿಸುತ್ತಿವೆ.

“ಒಂದು ತಿಂಗಳಿಡೀ ಹೋಟೆಲು ಮುಚ್ಚುವುದೆಂದರೆ ನಮಗೆ ಲಕ್ಷಾಂತರ ರೂಪಾಯಿ ನಷ್ಟ. ನಮ್ಮಲ್ಲಿ ಎಂಟು ಉದ್ಯೋಗಿಗಳಿದ್ದು ಅವರಿಗೆ ಈ ತಿಂಗಳು ಕೆಲಸವಿಲ್ಲದಂತಾಗಿದೆ” ಎಂದು ಶ್ರವಣಬೆಳಗೊಳದಲ್ಲಿ ಮಿಲಿಟರಿ ಹೋಟೆಲ್ ಒಂದನ್ನು ನಡೆಸುವವರೊಬ್ಬರು

ಹೇಳುತ್ತಾರೆ. ದಶಕಗಳಿಂದ ಅವರ ಕುಟುಂಬ ಈ ಹೋಟೆಲ್ ನಡೆಸುತ್ತಿದ್ದು ಚಿಕನ್ ಹಾಗೂ ಮಟನ್ ಖಾದ್ಯಗಳು ಇಲ್ಲಿ ಲಭ್ಯವಿವೆ. “ಮಹಾಮಸ್ತಕಾಭಿಷೇಕಕ್ಕೆ ಲಕ್ಷಾಂತರ ಜನರು ಬರುವುದರಿಂದ ಇದು ನಮಗೆ ಉತ್ತಮ ವ್ಯಾಪಾರಕ್ಕೆ ಒಂದು ಅವಕಾಶ. ಮಹಾಮಸ್ತಕಾಭಿಷೇಕ ನಡೆಯುವ ಏಳೆಂಟು ದಿನಗಳ ಸಂದರ್ಭ  ನಾವು ಯಾವತ್ತೂ ಸ್ವಯಂಪ್ರೇರಣೆಯಿಂದ ಹೋಟೆಲ್ ಮುಚ್ಚುತ್ತೇವೆ. ಆದರೆ ಒಂದು ತಿಂಗಳು ಮುಚ್ಚುವುದು ಕಷ್ಟ” ಎನ್ನುತ್ತಾರೆ ಅವರು.

ಒಂದೋ ಹೋಟೆಲ್ ಮುಚ್ಚಿ ಇಲ್ಲವೇ ಸಸ್ಯಾಹಾರಿ ಊಟವನ್ನೇ ಒದಗಿಸಿ ಎಂಬ ಸೂಚನೆ ಹಲವು ಹೋಟೆಲುಗಳಿಗೆ ಹೋಗಿವೆ. ಈ ಹಿಂದೆ ಕೂಡ ಮಹಾಮಸ್ತಕಾಭಿಷೇಕದ ಸಂದರ್ಭ ಇದೇ ನಿಯಮ ಪಾಲಿಸಲಾಗುತ್ತಿತ್ತು ಎಂದು ಶ್ರವಣಬೆಳಗೊಳ ಗ್ರಾಮ ಪಂಚಾಯತ್ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

ಎಲ್ಲಾ ಮಾಂಸಾಹಾರಿ ಹೋಟೆಲುಗಳು ಬಂದ್ ಆಗಿವೆಯೇ ಎಂದು ಪರಿಶೀಲಿಸಲು ನಾವು  ಗ್ರಾಮದ ವಿವಿಧ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೇವೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಿ ಎಂ ನವೀನ್ ಹೇಳುತ್ತಾರೆ.

LEAVE A REPLY