ಬಿ ಸಿ ರೋಡ್ ಫ್ಲೈ ಓವರ್ ಅಡಿ ಅನಧಿಕೃತ ತರಕಾರಿ ಮಾರಾಟದಿಂದ ಸಂಚಾರಕ್ಕೆ ಕಿರಿಕಿರಿ

ಬಿ ಸಿ ರೋಡು ಫ್ಲೈ ಓವರ್ ಅಡಿ ರಾಶಿ ಹಾಕಿ ಮಾರಾಟ ಮಾಡುತ್ತಿರುವ ತರಕಾರಿ ವ್ಯಾಪಾರಸ್ಥರು

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಬಿ ಸಿ ರೋಡು ಫ್ಲೈ ಓವರ್ ಅಡಿಭಾಗದಲ್ಲಿ ಅನಧಿಕೃತವಾಗಿ ತರಕಾರಿ ಮಾರಾಟಕ್ಕೆ ಇನ್ನೂ ಕಡಿವಾಣ ಬಿದ್ದಿಲ್ಲ. ಹೊರ ಊರಿನಿಂದ ಬರುವ ವ್ಯಾಪಾರಸ್ಥರು ಬೇಕಾಬಿಟ್ಟಿ ಹೆದ್ದಾರಿ ಬದಿಯಲ್ಲಿ ತರಕಾರಿ ರಾಶಿ ಹಾಕಿ ಮಾರಾಟ ಮಾಡುವ ದೃಶ್ಯ ಕಳೆದ ಒಂದೆರಡು ವಾರದಿಂದ ಬಿ ಸಿ ರೋಡು ಫ್ಲೈ ಓವರ್ ಅಡಿ ಭಾಗದಲ್ಲಿ ಕಂಡು ಬರುತ್ತಿದೆ.

ಕೆಲ ತಿಂಗಳುಗಳ ಹಿಂದೆ ಬಿ ಸಿ ರೋಡಿನ ಫ್ಲೈ ಓವರ್ ಅಡಿಭಾಗ ಹಾಗೂ ಹೆದ್ದಾರಿ ಬದಿಗಳಲ್ಲಿ ಎಲ್ಲಿಂದಲೋ ಬಂದ ತರಕಾರಿ ವ್ಯಾಪಾರಸ್ಥರು ಇಲ್ಲಿನ ಪುರಸಭಾಡಳಿತದ ನಿಯಮ ಹಾಗೂ ಟ್ರಾಫಿಕ್ ಪೊಲೀಸರ ಸೂಚನೆಯನ್ನೂ ಧಿಕ್ಕರಿಸಿ ತರಕಾರಿ ರಾಶಿ ಹಾಕಿ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಧ್ಯಮಗಳು ನಿರಂತರ ಬೆಳಕು ಚೆಲ್ಲಿದ ಪರಿಣಾಮ ಕೊನೆಗೂ ಎಚ್ಚೆತ್ತುಕೊಂಡ ಪುರಸಭಾಧಿಕಾರಿಗಳು ಹಾಗೂ ಟ್ರಾಫಿಕ್ ಪೊಲೀಸರು ಇಲ್ಲಿಂದ ವ್ಯಾಪಾರಸ್ಥರನ್ನು ತೆರವುಗೊಳಿಸಿದ್ದರು. ಅಲ್ಲದೆ ಬಿ ಸಿ ರೋಡು ಪೇಟೆಯ ಅಂಗಡಿ ತರಕಾರಿ ವ್ಯಾಪಾರಸ್ಥರು ಕೂಡಾ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಪೊಲೀಸ್ ಠಾಣೆ ಹಾಗೂ ಪುರಸಭಾ ಕಚೇರಿಗೆ ಮುತ್ತಿಗೆ ಹಾಕಿ ರಸ್ತೆ ಬದಿ ವ್ಯಾಪಾರಿಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿರುವುದನ್ನು ಈ ಸಂದರ್ಭ ಸ್ಮರಿಸಿಕೊಳ್ಳಬಹುದು.

23bntph1

ಇದೀಗ ಒಂದೆರಡು ತಿಂಗಳೊಳಗೆ ಮತ್ತೆ ಈ ವ್ಯಾಪಾರಸ್ಥರು ಮತ್ತದೇ ಸ್ಥಳಕ್ಕೆ ವಕ್ಕರಿಸಿದ್ದು, ಸಾರ್ವಜನಿಕರ ನೆಮ್ಮದಿ ಕೆಡಿಸುವುದರೊಂದಿಗೆ ಪುರಸಭಾಧಿಕಾರಿಗಳು ಹಾಗೂ ಟ್ರಾಫಿಕ್ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ್ದಾರೆ. ವಾಹನಗಳಲ್ಲಿ ಬರುವ ಮಂದಿ ಇಲ್ಲಿನ ತರಕಾರಿ ವ್ಯಾಪಾರಸ್ಥರ ಮುಂದೆ ವಾಹನ ನಿಲ್ಲಿಸಿ ಖರೀದಿ ಮಾಡುವುದರಿಂದ ಹಲವು ಸಮಯಗಳ ಕಾಲ ಹೆದ್ದಾರಿ ಬದಿಯಲ್ಲೇ ತಮ್ಮ ವಾಹನಗಳನ್ನು ನಿಲ್ಲಿಸುತ್ತಾರೆ. ಇದು ಸಹಜವಾಗಿಯೇ ಇಲ್ಲಿ ಟ್ರಾಫಿಕ್ ಕಿರಿಕಿರಿಗೆ ಕಾರಣವಾಗುತ್ತಿದೆ. ಬಾಡಿಗೆಗೆ ಅಂಗಡಿ ಪಡೆದು ಸ್ಥಳೀಯಾಡಳಿತದಿಂದ ಪರವಾನಿಗೆ ಪಡೆದು ವ್ಯಾಪಾರ ನಡೆಸುವ ವ್ಯಾಪಾರಿಗಳು ತಮ್ಮ ವ್ಯಾಪ್ತಿ ಮೀರಿ ಒಂದಿಂಚು ಹೆದ್ದಾರಿಗೆ ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಇಲ್ಲಿನ ಟ್ರಾಫಿಕ್ ಅಧಿಕಾರಿ ಚಂದ್ರಶೇಖರಯ್ಯ ಇದೀಗ ರಸ್ತೆ ಬದಿಯಲ್ಲೇ ತರಕಾರಿ ರಾಶಿ ಹಾಕಿ ಮಾರಾಟ ಮಾಡುವ ಬಗ್ಗೆ ಯಾವುದೇ ಚಕಾರ ಎತ್ತದೇ ಇರುವುದು ವ್ಯಾಪಾರಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.