ಬಿಜೆಪಿ ಪರ ಮೊಯ್ಲಿ ಹೇಳಿಕೆಗೆ ಕಾಂಗ್ರೆಸ್ ಪಾಳಯದಲ್ಲಿ ಅಚ್ಚರಿ

`ಮತಯಂತ್ರದಲ್ಲಿ ಗೋಲ್ಮಾಲ್ ಇಲ್ಲ’

 

ನಮ್ಮ ಪ್ರತಿನಿಧಿ ವರದಿ

 ಮಂಗಳೂರು :  ವಿದ್ಯುನ್ಮಾನ ಮತ ಯಂತ್ರಗಳು ಅಥವಾ ಇವಿಎಂಗಳ ಮೂಲಕ ಬಿಜೆಪಿ ಚುನಾವಣೆಯಲ್ಲಿ ಗೋಲ್ಮಾಲ್ ನಡೆಸುತ್ತಿದೆ ಎಂದು ಕಾಂಗ್ರೆಸ್ ಸಹಿತ ವಿಪಕ್ಷಗಳು ಕೇಂದ್ರದ ಬಿಜೆಪಿ ನೇತೃತ್ವದ ಸರಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರೆ, ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಸಂಸದ ವೀರಪ್ಪ ಮೊಯ್ಲಿ ಮಾತ್ರ  ಈ ಇವಿಎಂ ವಿಚಾರಕ್ಕೂ ಆಡಳಿತ ಬಿಜೆಪಿಗೂ ಯಾವುದೇ ಸಂಬಂಧವಿಲ್ಲವೆಂದು ಹೇಳಿ ಹಲವರ ಹುಬ್ಬೇರಿಸಿದ್ದಾರೆ.

“ಅಧಿಕಾರದಲ್ಲಿರುವ ಪಕ್ಷವಾಗಿ, ಇಂತಹ ಗೊಂದಲವೇರ್ಪಟ್ಟಾಗ ಅದನ್ನು ಪರಿಹರಿಸುವುದು ಬಿಜೆಪಿಯ ಕರ್ತವ್ಯ. ಬಿಜೆಪಿ ಮತ್ತು ಚುನಾವಣಾ ಆಯೋಗ ಯಾವುದಾದರೂ ಅತ್ಯುನ್ನತ ಸಂಶೋಧನಾ ಸಂಸ್ಥೆಯ ಮೊರೆ ಹೋಗಿ ಈ ಗೊಂದಲ ನಿವಾರಿಸಬೇಕು” ಎಂದಿದ್ದಾರೆ ಮೊಯ್ಲಿ.

ಹಿರಿಯ ಕಾಂಗ್ರೆಸ್ ನಾಯಕರಾಗಿದ್ದುಕೊಂಡು ಆಡಳಿತ ಬಿಜೆಪಿ ಪರವಾಗಿ ಮೊಯ್ಲಿ ನೀಡಿರುವ ಈ ಹೇಳಿಕೆ ಅವರು ಕಾಂಗ್ರೆಸ್ ತೊರೆಯುವ ಸೂಚನೆಯಿರಬಹುದೆಂದು ವ್ಯಾಪಕವಾಗಿ ತಿಳಿಯಲಾಗಿದೆ.  ಹಿರಿಯ ನಾಯಕರಾದ ಎಸ್ ಎಂ ಕೃಷ್ಣ, ಶ್ರೀನಿವಾಸ ಪ್ರಸಾದ್ ಇತ್ತೀಚೆಗೆ ಬಿಜೆಪಿ ಸೇರಿರುವುದು ಈ ಸಂದೇಹಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.

ಆದರೆ ಈ ಬಗ್ಗೆ ಮೊಯ್ಲಿಯನ್ನೇ ಪ್ರಶ್ನಿಸಿದಾಗ ಅವರಿಂದ ತೀಕ್ಷ್ಣ ಪ್ರತಿಕ್ರಿಯೆ ಲಭ್ಯವಾಯಿತು. “ನಾನು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠನಾಗಿರುವುದರಿಂದಲೇ ಇವಿಎಂ ಬಗ್ಗೆ  ಹೇಳಿಕೆ ನೀಡಿದ್ದೇನೆ. ಇವಿಎಂಗಳನ್ನು ವಿರೋಧಿಸಿದರೆ ಅದು ನಾನು ಮಾಡಿದ ಕಾರ್ಯವನ್ನೇ ಹಳಿದಂತೆ. ನಾನು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠನಾಗಿದ್ದೇನೆ ಹಾಗೂ ಕೊನೆಯವರೆಗೆ ನಿಷ್ಠನಾಗಿರುತ್ತೇನೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಎಸ್ ಎಂ ಕೃಷ್ಣಗೂ ತಮಗೂ ಹೋಲಿಕೆ ಮಾಡಿರುವುದಕ್ಕೂ ತಮ್ಮ ಆಕ್ಷೇಪ ವ್ಯಕ್ತಪಡಿಸಿದ ಮೊಯ್ಲಿ, “ಕೃಷ್ಣ ಅವರ ಇತಿಹಾಸವೇನು ? ಮೊಯ್ಲಿಯ ಇತಿಹಾಸವೇನು ? ಅವರು ಯಾವತ್ತೂ ಪಕ್ಷಕ್ಕೆ ನಿಷ್ಠರಾಗಿರಲೇ ಇಲ್ಲ. ಪ್ರಾಯಶಃ ಕೆಟ್ಟ ಉದ್ದೇಶಗಳಿಂದ ನಮ್ಮ ಪಕ್ಷದವರೇ ಇಂತಹ ವದಂತಿಗಳನ್ನು ಹರಡಿರಬಹುದು” ಎಂದರು.

“ಖರ್ಗೆಯವರಿಗೆ ನೀಡಿದ ಜವಾಬ್ದಾರಿಗಳತ್ತ ಬೊಟ್ಟು ಮಾಡಿ ನನ್ನ ಮತ್ತು ಅವರ ನಡುವೆ  ವೈಮನಸ್ಸು ಏರ್ಪಡಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ನನಗೆ ತಿಳಿದುಬಂದಿದೆ. ನಮ್ಮಿಬ್ಬರ ನಡುವಣ ಸಂಬಂಧ ಗಟ್ಟಿಯಾಗಿದೆ. ನಮ್ಮ ಗೆಳೆತನಕ್ಕೆ ದೊಡ್ಡ ಇತಿಹಾಸವಿದೆ. ಅವರ ಕೆಲಸದ ಬಗ್ಗೆ ನಾನೇಕೆ ಮತ್ಸರಪಡಲಿ?” ಎಂದು ಮೊಯ್ಲಿ ಪ್ರಶ್ನಿಸಿದರು.

ಮೊಯ್ಲಿಯ ಹೇಳಿಕೆಗಳು ಕಾಂಗ್ರೆಸ್ ವಲಯದಲ್ಲಿ ಆಶ್ಚರ್ಯ ಹುಟ್ಟಿಸಿವೆ.