ಮದ್ಯದಂಗಡಿ ವಿರುದ್ಧ ಸಿಡಿದೆದ್ದ ವೀರಕಂಭ ಗ್ರಾಮಸ್ಥರು

ನಮ್ಮ ಪ್ರತಿನಿಧಿ ವರದಿ

ವಿಟ್ಲ : ವೀರಕಂಭ ಗ್ರಾಮಸ್ಥರ ತೀವ್ರ ವಿರೋಧದ ನಡುವೆಯೂ ಜನವಸತಿ ಪ್ರದೇಶದಲ್ಲಿ ವೈನ್ ಶಾಪ್ ತೆರೆಯುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಸ್ಥಳೀಯರು ಸ್ಥಳಕ್ಕಾಗಮಿಸಿದ ಅಬಕಾರಿ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ವೀರಕಂಭ ಗ್ರಾಮದ ಕೇಪುಳ ಕೋಡಿಯ ಸ ನಂ 68/1ರ 0.28 ಎಕ್ರೆ ಸರಕಾರಿ ಭೂಮಿಯಲ್ಲಿ ಸ್ಥಳೀಯ ನಿವಾಸಿ ಕೃಷ್ಣಪ್ಪ ಪೂಜಾರಿ ಎಂಬವರು ಹೊಸ ಕಟ್ಟಡ ನಿರ್ಮಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕ ಪೇಟೆಯಲ್ಲಿದ್ದ ಪ್ರಶಾಂತ್ ವೈನ್ಸ್ ತೆರವಾಗುವ ಕಾರಣ ಕೃಷ್ಣಪ್ಪ ಪೂಜಾರಿಯ ಕಟ್ಟಡವನ್ನು ಮಾಲಿಕರು ಪಡೆದು ಕೇಪುಳಕೋಡಿಗೆ ಸ್ಥಳಾಂತರ ಮಾಡಿದ್ದಾರೆ. ಸುಮಾರು 152ಕ್ಕೂ ಹೆಚ್ಚು ಕುಟುಂಬಗಳಿರುವ ಎರ್ಮೆಮಜಲು, ಕೇಪುಳಕೋಡಿ, ಬಾಯಿಲ ಪರಿಸರ ಈವರೆಗೆ ಶಾಂತಿ-ಸೌಹಾರ್ದತೆಗೆ ಹೆಸರಾಗಿತ್ತು. ಅಲ್ಲದೇ ಎರ್ಮೆಮಜಲಿನಿಂದ ಬಾಯಿಲ ಮೂಲಕ ದಾಸಕೋಡಿಗೆ ಸಂಪರ್ಕವಾಗುವ ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ಜನ ಹಾಗೂ 65ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಚರಿಸುತ್ತಿದ್ದಾರೆ. ಇದೇ ರಸ್ತೆ ಬದಿಯಲ್ಲಿ ಮದ್ಯದಂಗಡಿ ತೆರೆಯುವುದನ್ನು ವಿರೋಧಿಸಿ ಸ್ಥಳೀಯರು ಮತ್ತು ಸ್ತ್ರೀ ಶಕ್ತಿ ಗುಂಪುಗಳು ತಿಂಗಳ ಹಿಂದೆಯೇ ಜಿಲ್ಲಾಧಿಕಾರಿಗೆ, ಅಬಕಾರಿ ಇಲಾಖೆಗೆ, ಪೊಲೀಸ್ ಇಲಾಖೆಗೆ ಮತ್ತು ಸ್ಥಳೀಯ ಗ್ರಾ ಪಂ.ಗೆ ಆಕ್ಷೇಪಣೆ ಸಲ್ಲಿಸಿದ್ದರು.

ಸ್ಥಳೀಯರ ತೀವ್ರ ವಿರೋಧದ ಹೊರತಾಗಿಯೂ ಬಂಟ್ವಾಳ ಅಬಕಾರಿ ಇಲಾಖೆಯ ಅಧಿಕಾರಿ ಕಾಟಾಚಾರಕ್ಕಾಗಿ ಸ್ಥಳ ತನಿಖೆ ನಡೆಸಿ ನಿರಪೇಕ್ಷಣಾ ಪತ್ರ ನೀಡಿರುವುದು ಇದೀಗ ಆಕ್ರೋಶಕ್ಕೆ ಕಾರಣವಾಗಿದೆ. ಮಂಗಳವಾರ ರಾತ್ರಿ ಎರಡು ಮೂರು ವಾಹನಗಳಲ್ಲಿ ಕೇಪುಳಕೋಡಿಗೆ ಮದ್ಯ ಸರಬರಾಜು ಮಾಡಿದ ಮಾಲಿಕರು ಬುಧವಾರ ಬೆಳಗ್ಗೆ ತರಾತುರಿಯಲ್ಲಿ ವೈನ್ ಶಾಪ್ ಉದ್ಘಾಟನೆಗೆ ಮುಂದಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ನೂರಾರು ಮಹಿಳೆಯರು ಮತ್ತು ಸಾರ್ವಜನಿಕರು ತಾವು ಇಲಾಖೆಗಳಿಗೆ ನೀಡಿದ್ದ ದಾಖಲೆಗಳ ಸಹಿತ ಅಂಗಡಿ ಮುಂದೆ ಜಮಾಯಿಸಿ ಬಾಗಿಲು ತೆರೆಯದಂತೆ ತಡೆವೊಡ್ಡಿದರು.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪಿಡಿಒ ಗಿರಿಜಾ ಮಾತನಾಡಿ, “ಮದ್ಯದಂಗಡಿ ತೆರೆಯಲು ಪಂ ಯಾವುದೇ ಪರವಾನಿಗೆಯಾಗಲೀ, ನಿರಪೇಕ್ಷಣಾ ಪತ್ರವಾಗಲೀ ಕೊಟ್ಟಿಲ್ಲ” ಎಂದು ಸ್ಪಷ್ಟಪಡಿಸಿದರು.

ದಾಸ್ತಾನು ಮಾಡಿದ ಮದ್ಯವನ್ನು ತಕ್ಷಣವೇ ತೆರವು ಮಾಡಬೇಕೆಂದು ಪಟ್ಟು ಹಿಡಿದ ಜನರ ಆಕ್ರೋಶ ಮತ್ತಷ್ಟು ಹೆಚ್ಚಾಗುತ್ತಿದ್ದಂತೆ ವಿಟ್ಲ ಪೊಲೀಸರು ಸ್ಥಳಕ್ಕಾಗಮಿಸಿ, ಮದ್ಯದಂಗಡಿ ಮಾಲಕರಲ್ಲಿ ದಾಖಲೆಗಳನ್ನು ನೀಡುವಂತೆ ಕೇಳಿದಾಗ “ಅದೆಲ್ಲವೂ ಸರಿಯಾಗಿದೆ. ಕಚೇರಿಗೆ ತಂದು ತೋರಿಸುತ್ತೇವೆ” ಎಂಬ ಹಾರಿಕೆ ಉತ್ತರ ನೀಡಿ ನುಣುಚಿಕೊಂಡರು.

ಬಂಟ್ವಾಳ ಅಬಕಾರಿ ಅಧಿಕಾರಿ ಸೌಮ್ಯಲತಾ ಸ್ಥಳಕ್ಕಾಗಮಿಸುತ್ತಿದ್ದಂತೆ ಆಕ್ರೋಶಗೊಂಡ ಪ್ರತಿಭಟನಾಕಾರರು ಊರಿನ ಶಾಂತಿ ಕದಡಲು ನೀವೇ ಹೊರಟಿದ್ದೀರೆಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. “ಜನರ ವಿರೋಧದ ನಡುವೆ ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯುವುದು ಸರಿಯಲ್ಲ” ಎಂದು ಹೇಳಿದ ಪೊಲೀಸರು, “ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಸರ್ಕಾರಕ್ಕೆ ಪತ್ರ ಬರೆಯಲಾಗುವುದು” ಎಂದು ಭರವಸೆ ನೀಡಿದರು.

ಅಬಕಾರಿ ಅಧಿಕಾರಿಯ ಮತ್ತು ಮಾಲಿಕನ ಎಡವಟ್ಟಿನಿಂದಾಗಿ ದಾಸ್ತಾನಿರಿಸಿದ ಮದ್ಯವನ್ನು ಕಾವಲು ಕಾಯುವ ಹೊಣೆಗಾರಿಕೆ ಮಾತ್ರ ವಿಟ್ಲ ಪೊಲೀಸರ ಹೆಗಲೇರಿದೆ.