ಗೋವಾ ಕನ್ನಡಿಗರಿಗೆ ಕಿರುಕುಳ ಖಂಡಿಸಿ ಕರವೇ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ

ಕಾರವಾರ : ಗೋವಾ ಕನ್ನಡಿಗರಿಗೆ ಅಲ್ಲಿನ ರಾಜ್ಯ ಸರಕಾರ ಕಿರುಕುಳ ನೀಡುತ್ತಿರುವುದರಿಂದ ರಾಜ್ಯಪಾಲರು ಮಧ್ಯ ಪ್ರವೇಶಿಸಿ ಮುಖ್ಯಮಂತ್ರಿಗಳು ನೇರವಾಗಿ ಗೋವಾ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸುವಂತೆ ಸೂಚಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಗೋವಾದ ಬೈನಾ ಬೀಚಿನಲ್ಲಿದ್ದ ಕನ್ನಡಿಗರ ಗುಡಿಸಲುಗಳನ್ನು ಸರ್ಕಾರ ಈಗಾಗಲೇ ನೆಲಸಮಗೊಳಿಸಿದ್ದರಿಂದ ಕನ್ನಡಿಗರ ಕುಟುಂಬ ಬೀದಿಗೆ ಬಿದ್ದಿದೆ. ಗಡಿನಾಡು ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಚಿಂಚನಸೂರು ಅವರು ಗೋವಾಕ್ಕೆ ಹೋಗಿ ಅಲ್ಲಿನ ಸರಕಾರದೊಂದಿಗೆ ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಮುಖ್ಯಮಂತ್ರಿಗಳು ಗೋವಾ ಮುಖ್ಯಮಂತ್ರಿಗಳೊಂದಿಗೆ ಕನ್ನಡಿಗರ ರಕ್ಷಣೆ ಸಂಬಂಧ ನೇರವಾಗಿ ಮಾತನಾಡಬೇಕು. ಗೋವಾ ಕನ್ನಡಿಗರಿಗೆ ಇದೇ ರೀತಿಯ ತೊಂದರೆ ಮುಂದುವರಿಸಿದರೆ, ಮುಂದಿನ ದಿನಗಳಲ್ಲಿ ಕನ್ನಡಪರ ಸಂಘಟನೆಗಳ ಜತೆಗೂಡಿ ಗೋವಾಗೆ ಮುತ್ತಿಗೆ ಹಾಕಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಬಳಿಕ ಮನವಿಯನ್ನು ಜಿಲ್ಲಾಧಿಕಾರಿಯ ಮೂಲಕ ರಾಜ್ಯಪಾಲರಿಗೆ ಮತ್ತು ಮುಖ್ಯ ಮಂತ್ರಿಗೆ ಸಲ್ಲಿಸಿದರು.