ರಸ್ತೆ ಪರವಾನಗಿ ಉಲ್ಲಂಘಿಸಿದ ಬಸ್ಸುಗಳ ವಿರುದ್ಧ ಸೂಕ್ತ ಕ್ರಮಕ್ಕೆ ವೇದಿಕೆ ಆಗ್ರಹ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದಲ್ಲಿ ರಸ್ತೆ ಪರವಾನಗಿ ಉಲ್ಲಂಘಿಸುವ ರಸ್ತೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕ ಹಿತರಕ್ಷಣಾ ವೇದಿಕೆಯು ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳನ್ನು ಒತ್ತಾಯಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಜೆರಾಲ್ಡ್ ಟವರ್ಸ್, “ಕೆಲವು ಬಸ್ಸುಗಳಿಗೆ ಮಲ್ಲಿಕಟ್ಟೆ ಮತ್ತು ಮಂಗಳಾದೇವಿ ರಸ್ತೆಯಲ್ಲಿ ಕಾರ್ಯಾಚರಣೆಗೆ ಪರವಾನಗಿ ನೀಡಲಾಗಿದ್ದರೂ ಅವುಗಳು ರಸ್ತೆ ನಿಯಮ ಉಲ್ಲಂಘಿಸಿ ಸ್ಟೇಟ್ ಬ್ಯಾಂಕ್ ರಸ್ತೆಯಲ್ಲಿ ಕಾರ್ಯಾಚರಿಸುತ್ತಿವೆ” ಎಂದು ತಿಳಿಸಿದರು.

ವಿಮೆ ಇಲ್ಲ

ಒಂದು ವೇಳೆ ಸ್ಟೇಟ್ ಬ್ಯಾಂಕ್ ಕಾರ್ಯಾಚರಣೆ ವೇಳೆ ಅಪಘಾತ ಸಂಭವಿಸಿದರೆ ವಿಮಾ ಪರಿಹಾರ ಪಡೆಯುವುದು ಸಾಧ್ಯವಿಲ್ಲ. ಇಂತಹ ಸನ್ನಿವೇಶದಲ್ಲಿ ಪ್ರಯಾಣಿಕರ ಸುರಕ್ಷತೆ ಜವಾಬ್ದಾರಿ ಯಾರು ತೆಗೆದುಕೊಳ್ಳುತ್ತಾರೆ ? ಅಧಿಕಾರಿಗಳು ತೆಗೆದುಕೊಳ್ಳುತ್ತಾರೆಯೇ ? ಹಾಗಾಗಿ ಮಂಗಳಾದೇವಿ ಪರವಾನಗಿ ಹೊಂದಿರುವ ಬಸ್ಸುಗಳನ್ನು ವಾಹನ ನಿಬಿಡತೆ ಹೆಚ್ಚಿರುವ ಹಂಪನಕಟ್ಟೆ ಪ್ರದೇಶದಲ್ಲಿ ಸೆರೆಹಿಡಿಯಬೇಕು ಎಂದು ಅವರು ತಿಳಿಸಿದರು.

ಬಸ್ಸು ಮಾಲಕರು ದೂರು ನೀಡಬೇಕು

ಮಂಗಳೂರು ಸರ್ವಿಸ್ ಬಸ್ ನಿಲ್ದಾಣಕ್ಕೆ ಮತ್ತು ಸ್ಟೇಟ್ ಬ್ಯಾಂಕಿಗೆ ಕಾರ್ಯಾಚರಿಸುವ ಬಸ್ ಮಾಲಕರು ಮಲ್ಲಿಕಟ್ಟೆ ನಿಲ್ದಾಣಕ್ಕೆ ಕಾರ್ಯಾಚರಿಸುವ ಬಸ್ಸುಗಳ ಮಾಲಕರ ವಿರುದ್ಧ ದೂರು ನೀಡಬೇಕು. “ಒಂದು ವೇಳೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ವಿಫಲವಾದರೆ ವೇದಿಕೆಯು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲಿದೆ” ಎಂದು ಎಚ್ಚರಿಸಿರುವ ಜೆರಾಲ್ಡ್, ಅಧಿಕಾರಿಗಳು ಕರ್ಕಶ ಹಾರ್ನುಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.