ಬ್ಯಾಂಕ್ ಪರೀಕ್ಷಾ ಕೇಂದ್ರಕ್ಕೆ ನುಗ್ಗಲು ಯತ್ನಿಸಿದ ಕರವೇ ಕಾರ್ಯಕರ್ತರ ಬಂಧನ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಬ್ಯಾಂಕ್ ಪರೀಕ್ಷೆ ಬರೆಯಲು ಬಂದಿದ್ದ ಅನ್ಯ ರಾಜ್ಯದ ವಿದ್ಯಾರ್ಥಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ತಡೆಯೊಡ್ಡಲು ಯತ್ನಿಸಿದ ಘಟನೆ ನಗರದಲ್ಲಿ ಭಾನುವಾರ ನಡೆಯಿತು.

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ವಿವಿಧ ಹುದ್ದೆಗಳಿಗೆ ಭಾನುವಾರ ಪರೀಕ್ಷೆ ಆಯೋಜಿಸಲಾಗಿತ್ತು. ರಾಜ್ಯದ ವಿವಿಧ ಭಾಗಗಳಲ್ಲಿ ಈ ಪರೀಕ್ಷೆ ನಡೆಯುತ್ತಿದ್ದು, ಮಂಗಳೂರು ಹೊರವಲಯದ ಬೊಂದೇಲಿನಲ್ಲಿರುವ ಬೆಸೆಂಟ್ ವಿದ್ಯಾಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿಯೂ ಬ್ಯಾಂಕ್ ಪರೀಕ್ಷೆ ಆಯೋಜಿಸಲಾಗಿತ್ತು.

ಇದೇ ವೇಳೆ ಆಗಮಿಸಿದ ಕರ್ನಾಟಕ ರಕ್ಷಣಾ ವೇದಿಕೆ (ಟಿ ಎ ನಾರಾಯಣ ಗೌಡ ಘಟಕ)ಕಾರ್ಯಕರ್ತರು ಈ ಕೇಂದ್ರಕ್ಕೆ ಮುತ್ತಿಗೆ ಹಾಕಿದರು. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಕಾವೂರು ಪೆÇಲೀಸರು ಹಲವು ಮಂದಿ ಕಾರ್ಯಕರ್ತರನ್ನು ವಶಕ್ಕೆ ಪಡೆದರು.

ಕರ್ನಾಟಕ ಗ್ರಾಮೀಣ ಬ್ಯಾಂಕುಗಳಲ್ಲಿ ಖಾಲಿ ಇರುವ ಸ್ಥಾನಗಳನ್ನು ತುಂಬಲು ಸೆಪ್ಟೆಂಬರ್ 9ರಿಂದ ಪ್ರವೇಶ ಪರೀಕ್ಷೆ ಆರಂಭಗೊಂಡಿದ್ದು, 24ರವರೆಗೆ ನಡೆಯಲಿದೆ. ಅದರೆ, ಬ್ಯಾಂಕುಗಳಲ್ಲಿ ಉದ್ಯೋಗವನ್ನು ಕನ್ನಡಿಗರಿಗೆ ತಪ್ಪಿಸಿ ಕನ್ನಡಿಗೇತರರನ್ನು ನೇಮಕ ಮಾಡಲು ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿದೆ.

ಕರ್ನಾಟಕದ ಮೂರು ಗ್ರಾಮೀಣ ಬ್ಯಾಂಕುಗಳ ಸಾವಿರಾರು ಹುದ್ದೆಗಳಿಗಾಗಿ ನಡೆಯುವ ಈ ಪ್ರವೇಶ ಪರೀಕ್ಷೆಯಲ್ಲಿ ಕನ್ನಡಿಗ ನಿರುದ್ಯೋಗಿಗಳಿಗೆ ದೊರೆಯಬೇಕಿದ್ದ ಹುದ್ದೆಗಳು ಬೇರೆ ರಾಜ್ಯದವರ ಪಾಲಾಗಲಿದೆ. ಆದ್ದರಿಂದ, ರಾಜ್ಯ ಸರ್ಕಾರ ತಕ್ಷಣ ಈ ಪರೀಕ್ಷೆ ತಡೆಹಿಡಿಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

2014ಕ್ಕೂ ಮೊದಲಿದ್ದ ನಿಯಮದಂತೆ 10ನೇ ತರಗತಿಯವರೆಗೆ ಕನ್ನಡ ಭಾಷೆಯಾಗಿ ಕಲಿತವರು ಮಾತ್ರ ಪರೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ವೇದಿಕೆಯ ಜಿಲ್ಲಾಧ್ಯಕ್ಷ ಅನಿಲ್ ದಾಸ್ ಸೇರಿದಂತೆ ಹಲವು ಮಂದಿಯನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಲಾಯಿತು.