ಮಂಗಳೂರು ವಿ ವಿ ಎಡವಟ್ಟು : ಕ್ಷಮೆಯಾಚಿಸಿದ ಬರಗೂರು

ಪುಸ್ತಕದಲ್ಲಿ ಸೈನಿಕರು ಅತ್ಯಾಚಾರಿಗಳೆಂದು ಪ್ರಕಟ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಪ್ರಸಕ್ತ ಸಾಲಿನಲ್ಲಿ ಮಂಗಳೂರು ವಿ ವಿ ಪ್ರಕಟಿಸಿರುವ ಪ್ರಥಮ ಬಿಸಿಎ ಕನ್ನಡ ಪುಸ್ತಕದಲ್ಲಿ ಸೈನಿಕರನ್ನು ಅತ್ಯಾಚಾರಿಗಳೆಂದು ಬಿಂಬಿಸಲಾಗಿದೆ. ವಿ ವಿ.ಯ ಈ ಎಡವಟ್ಟು ವ್ಯಾಪಕ ಜನಾಕ್ರೋಶಕ್ಕೆ ಕಾರಣವಾಗಿದೆ. ಮಾಜಿ ಸೈನಿಕರು ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪನವರು ಬರೆದಿರುವ `ಯುದ್ಧ ಒಂದು ಉದ್ಯಮ’ ಎಂಬ ಪಠ್ಯವೊಂದರಲ್ಲಿರುವ ಅಂಶ ವಿವಾದಕ್ಕೆ ಕಾರಣವಾಗಿದೆ. ಲೇಖನದಲ್ಲಿ ಬರಗೂರು ರಾಮಚಂದ್ರಪ್ಪನವರು ತಮ್ಮ ಸ್ನೇಹಿತನಾಗಿರುವ ಸೈನಿಕನ ಮಾತುಗಳನ್ನು ಉಲ್ಲೇಖಿಸಿ ಬರೆದಿದ್ದಾರೆ. ಗಡಿಗಳಲ್ಲಿ ಯುದ್ಧ ನಡೆದಾಗ ಅತ್ಯಾಚಾರವೂ ನಡೆಯುತ್ತದೆ ಎಂದು ಬರೆಯಲಾಗಿದೆ. ಹೀಗಾಗಿ ಇದು ಭಾರೀ ಟೀಕೆಗೆ ಕಾರಣವಾಗಿದ್ದು, ವಿ ವಿ ಪ್ರಸಾರಂಗದ ವಿರುದ್ಧ ಟೀಕೆ ಕೇಳಿ ಬಂದಿದೆ.

ಪುಸ್ತಕದಲ್ಲಿ ಆಧಾರರಹಿತ ಹೇಳಿಕೆಗಳನ್ನು ದಾಖಲಿಸಿರುವುದು ಟೀಕೆಗೆ ಕಾರಣವಾಗಿದೆ. ಲೇಖಕರ ವೈಯಕ್ತಿಕ ಅಭಿಪ್ರಾಯಗಳನ್ನು ವಿದ್ಯಾರ್ಥಿಗಳಿಗೆ ಪಠ್ಯದ ರೂಪದಲ್ಲಿ ನೀಡಿರೋದು ಆಕ್ರೋಶಕ್ಕೆ ಎಡೆಮಾಡಿದೆ.

“ಗಡಿ ಪ್ರದೇಶದಲ್ಲಿ ಪರಸ್ಪರ ಕ್ರೌರ್ಯದ ಪ್ರದರ್ಶನ ಮಾಡುವ ಪರಾಕ್ರಮಿಗಳು ಇದ್ದೇ ಇರುತ್ತಾರೆಂಬುದು ನನ್ನ ಗೆಳೆಯನ ಅನುಭವದ ಅಭಿಪ್ರಾಯ. ಪರಸ್ಪರ ಮುತ್ತಿಗೆ ನಡೆದಾಗ ಗಡಿಯ ಗ್ರಾಮಗಳಲ್ಲಿ ಅತ್ಯಾಚಾರವೂ ನಡೆಯುತ್ತದೆಯೆಂದೂ ಎರಡೂ ರಾಷ್ಟ್ರಗಳ ಕೆಲವು ಸೈನಿಕರು ಇದರಲ್ಲಿ ಭಾಗಿಗಳೆಂದೂ ಈ ಗೆಳೆಯ ಘಟನೆಗಳ ಸಮೇತ ವಿವರಿಸುತ್ತಾನೆ. ನಾವು ಸಾಮಾನ್ಯವಾಗಿ ನಮ್ಮವರೆಲ್ಲ ಸಜ್ಜನರೂ, ಸಂಭಾವಿತರೂ ಎಂದು ನಂಬಿರುತ್ತೇವೆ ಅಥವಾ ಹಾಗೆ ನಂಬಿಸಲಾಗಿರುತ್ತದೆ” ಎಂದು ಬರಗೂರು ತಮ್ಮ ಅಭಿಪ್ರಾಯವನ್ನು ಬರೆದಿದ್ದಾರೆ.

ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಲೇಖಕ ಬರಗೂರು ರಾಮಚಂದ್ರಪ್ಪನವರು ಸೈನಿಕರ ಕ್ಷಮೆ ಯಾಚಿಸಿದ್ದಾರೆ. “ಸೈನಿಕರನ್ನು ನಾನು ಅತ್ಯಾಚಾರಿ ಎಂದು ಹೇಳಿದರೆ ಅಮಮಾನ ಮಾಡಿಕೊಂಡಂತೆಯೇ. ಗಡಿ ಕಾಯುವ ಸಂದರ್ಭದಲ್ಲಿ ಸೈನಿಕರಿಗೆ ಕಾಡುವ ಒಂಟಿತನ, ಅವರಿಗೆ ಹಿರಿಯ ಅಧಿಕಾರಗಳಿಂದ ಉಂಟಾಗುವ ಕಿರಿಕಿರಿ ಬಗ್ಗೆ ನಾನು ಬರೆದದ್ದು” ಎಂದು ಸ್ಪಷ್ಟಪಡಿಸಿದ್ದಾರೆ.

“ನಾನು ಬೇರೆಲ್ಲೋ ಬರೆದ ಲೇಖನವನ್ನ ತನ್ನ ಗಮನಕ್ಕೆ ತಾರದೆಯೇ ಪುಸ್ತಕಕ್ಕೆ ಅಳವಡಿಸಲಾಗಿದೆ. ನಾನು ಯಾರಿಗೂ ಲಿಖಿತ ಅನುಮತಿ ಕೊಟ್ಟಿರಲಿಲ್ಲ. ಸಂಭಾವನೆಯನ್ನೂ ಪಡೆದಿಲ್ಲ. ಲೇಖನವನ್ನು ಪುಸ್ತಕಕ್ಕೆ ಜೋಡಿಸುವ ಮುನ್ನ ಪುಸ್ತಕ ಸಮಿತಿಯು ಅದನ್ನು ಸರಿಯಾಗಿ ಪರಾಮರ್ಶಿಸಬೇಕಿತ್ತು. ವೈಚಾರಿಕ ಭಾಷಣಗಳೇ ಬೇರೆ, ಪುಸ್ತಕದ ಲೇಖನಗಳೇ ಬೇರೆ. ಪುಸ್ತಕದಲ್ಲಿ ಪ್ರಕಟಿಸುವಾಗ ಯಾರ ಭಾವನೆಗೂ ಧಕ್ಕೆ ಬಾರದಂತೆ ಎಚ್ಚರ ವಹಿಸಬೇಕು” ಎಂದು ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ. ಅಲ್ಲದೇ, ತಮ್ಮ ಲೇಖನದಿಂದ ಸೈನಿಕರಿಗೆ ನೋವಾಗಿದ್ದರೆ ನಾನು ಬೇಷರತ್ ಕ್ಷಮೆ ಕೇಳುತ್ತೇನೆ ಎಂದೂ ಅವರು ತಿಳಿಸಿದ್ದಾರೆ.